

ಕೊಪ್ಪಳ ಸೆಪ್ಟೆಂಬರ್ 04: ಮಕ್ಕಳ ಹಕ್ಕುಗಳ ಸಂರಕ್ಷಣೆ, ಪಾಲನೆಗೆ ಎಲ್ಲಾ ಇಲಾಖೆಗಳ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ ರಾಮತ್ನಾಳ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣ ಘಟಕ ಕೊಪ್ಪಳ ಇವರ ಸಹಯೋಗದಲ್ಲಿ ಜಿಲ್ಲಾ ಪಂಚಾಯತ್‌ನ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಸೆಪ್ಟೆಂಬರ್ 04ರಂದು ಹಮ್ಮಿಕೊಂಡಿದ್ದ ಮಕ್ಕಳ ರಕ್ಷಣಾ ವ್ಯವಸ್ಥೆಗಳ ಕುರಿತು ಭಾಗೀದಾರರೊಂದಿಗೆ ಸಮಾಲೋಚನಾ ಮತ್ತು ಪ್ರಗತಿ ಪರೀಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಯ ಯೋಜನೆಗಳಡಿ ಸೌಲಭ್ಯ ಒದಗಿಸುವ ಸಂದರ್ಭದಲ್ಲಿ ಫಲಾನುಭವಿಗಳಿಂದ “ನನ್ನ ಕುಟುಂಬದಲ್ಲಿ ಯಾವುದೇ ಬಾಲ್ಯವಿವಾಹಕ್ಕೆ ಅವಕಾಶ ನೀಡುವುದಿಲ್ಲ ಹಾಗೂ ಅಂತಹ ಬಾಲ್ಯ ವಿವಾಹದಲ್ಲಿ ಭಾಗಿಯಾಗುವುದಿಲ್ಲ. ತಪ್ಪಿದಲ್ಲಿ ನನಗೆ ನೀಡಿರುವ ಸರ್ಕಾರದ ಸವಲತ್ತನ್ನು ಹಿಂಪಡೆಯಬಹುದಾಗಿದೆ” ಎಂಬ ಘೋಷಣೆಯನ್ನು ಕಡ್ಡಾಯ ಪಡೆಯಬೇಕು. ಸಾಮೂಹಿಕ ವಿವಾಹ ಆಯೋಜಕರು, ದೇವಸ್ಥಾನ ಮಂಡಳಿ, ಖಾಸಗಿ ಟ್ರಸ್ಟ್ ಅಥವಾ ವ್ಯಕ್ತಿ, ಸಂಘ ಸಂಸ್ಥೆಗಳು, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರಬೇಕು.
ಸಾಮೂಹಿಕ ವಿವಾಹ ಆಯೋಜನೆಗೂ ಮುನ್ನಾ ಸಂಬAಧಪಟ್ಟ ತಹಶೀಲ್ದಾರರಿಂದ ಅನುಮತಿ ಪಡೆಯುವುದು ಕಡ್ಡಾಯ. ಮದುವೆ ನಡೆಯುವ ಕಲ್ಯಾಣ ಮಂಟಪ, ದೇವಸ್ಥಾನ, ಮದುವೆ ನಡೆಯುವ ಇತರೆ ಸ್ಥಳಗಳಲ್ಲಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ಕಡ್ಡಾಯ ಶಾಶ್ವತ ಗೋಡೆ ಬರಹಗಳನ್ನು ಬರೆಸಬೇಕು. ಈ ಬಗ್ಗೆ ಕಂದಾಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಾಗಲು 1098 ಕಾರ್ಯನಿರ್ವಹಿಸುತ್ತಿದ್ದು (ಪ್ರಸ್ತುತ 112), ಈ ಬಗ್ಗೆ ಎಲ್ಲಾ ವಸತಿ ಶಾಲೆಗಳಲ್ಲಿ ಗೋಡೆ ಬರಹಗಳನ್ನು ಬರೆಸಬೇಕು. ವಸತಿ ನಿಲಯ ಹಾಗೂ ವಸತಿ ಶಾಲೆಗಳ ಮಕ್ಕಳಿಗೆ ಬಾಲ್ಯ ವಿವಾಹ ನಿಷೇದ ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ-2016ನ್ನು ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷೆಯನ್ನು ನಿಷೇಧಿಸಬೇಕು. ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಕ್ಲಬ್ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಎಲ್ಲ ಶಾಲೆಗಳಲ್ಲಿ ಷೋಕ್ಸೊ ಕಾಯ್ದೆ 2012 & ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ-2015ನ್ನು ಅನುಷ್ಠಾನಗೊಳಿಸಿ ಸರ್ಕಾರಿ, ಅನುದಾನಿತ ಖಾಸಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆಯ ಬಗ್ಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮದುವೆ ನಡೆಯುವ ಕಲ್ಯಾಣ ಮಂಟಪ, ದೇವಸ್ಥಾನ, ಮದುವೆ ನಡೆಯುವ ಇತರೆ ಸ್ಥಳಗಳಲ್ಲಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ಕಡ್ಡಾಯವಾಗಿ ಶಾಶ್ವತ ಗೋಡೆ ಬರಹ ಬರೆಸಬೇಕು.
ಕರ್ನಾಟಕ ರಾಜ್ಯ ಅಬಕಾರಿ ಕಾಯ್ದೆ-1965 ಕಲಂ 20(1)ರನ್ವಯ 18 ವರ್ಷದೊಳಗಿನ ಮಕ್ಕಳನ್ನು ಮದ್ಯ ಮಾರಾಟಗಾರರು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. ಕರ್ನಾಟಕ ರಾಜ್ಯ ಅಬಕಾರಿ ನಿಯಮಾವಳಿ-1967 ಕಲಂ-10(ಇ)ರನ್ವಯ 21 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ನಿಷೇಧಿಸಿದೆ. ಈ ಕುರಿತು ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸರಕು ಸಾಗಣೆ ವಾಹನಗಳಲ್ಲಿ ಕೂಲಿ ಕಾರ್ಮಿಕರು ಶಾಲಾ ಮಕ್ಕಳು ಹಾಗೂ ಇನ್ನಿತರೆ ಪ್ರಯಾಣಿಕರನ್ನು ಕಾನೂನು ಬಾಹಿರವಾಗಿ ಸಾಗಿಸುವುದನ್ನು ತಡೆಹಿಡಿಯಲು ಕ್ರಮ ವಹಿಸಿ ಎಂದು ಸೂಚನೆ ನೀಡಿದರು. ತೆರೆದ ಮನೆ ಕಾರ್ಯಕ್ರಮವನ್ನು ನಡೆಸುವ ಬಗ್ಗೆ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಗ್ರಾಮ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಕಾವಲು ಸಮಿತಿಗಳ ರಚನೆಗೆ ಎಲ್ಲಾ ತಾಲೂಕಿನ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಪಿಡಿಓಗಳು ಸೂಕ್ತ ಕ್ರಮ ವಹಿಸಬೇಕು. ಕೃಷಿ ಹೊಂಡಗಳಲ್ಲಿ ಮಕ್ಕಳು ಹಾಗೂ ಪಶುಗಳು ಬೀಳದಂತೆ ನೆರಳು ಪರದೆ ಘಟಕನ್ನು ಅಳವಡಿಸಬೇಕು. ಗಣಿಗಾರಿಕೆ ಮಾಡಿ ಪರಿತ್ಯಜಿಸಿದ, ಮುಚ್ಚಿದ ಗಣಿ ಪ್ರದೇಶಗಳಲ್ಲಿ ಮಕ್ಕಳು ಹಾಗೂ ಪಶುಗಳು ಬೀಳದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳು ಹಾಗೂ ಇನ್ನಿತರೆ ಪ್ರಯಾಣಿಕರನ್ನು ಕಾನೂನು ಬಾಹಿರವಾಗಿ ಸಾಗಿಸುವುದನ್ನು ತಡೆ ಹಿಡಿಯುವ ಬಗ್ಗೆ ಪ್ರಾದೇಶಿಕ ಸಾರಿಗೆ ಇಲಾಖೆಯವರು, ಶಾಲಾ ಕಾಲೇಜು ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಗೆ ಬಸ್ ವ್ಯವಸ್ಥೆಯನ್ನು ಹಚ್ಚಿಸಲು ಕೆ.ಕೆ.ಆರ್.ಟಿ.ಸಿ ಯವರು ಕ್ರಮ ಕೈಗೊಳ್ಳಬೇಕು. ಬಾಧಿತರ ಪರಿಹಾರಧನವನ್ನು ಶೀಘ್ರದಲ್ಲಿ ನೀಡುವಂತಾಗಬೇಕು. ಬಾಲಕಾರ್ಮಿಕ ಪತ್ತೆಗಾಗಿ ಕಾರ್ಮಿಕ ಇಲಾಖೆ ಮತ್ತು ಬಾಲ ಕಾರ್ಮಿಕ ಯೋಜನೆಯಿಂದ ಅನೀರಿಕ್ಷಿತ ದಾಳಿಗಳನ್ನು ನಿಯಮಿತವಾಗಿ ಮಾಸಿಕವಾರು ನಡೆಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಫೋಕ್ಸೋ ಕಾಯ್ದೆ 2012 ಮತ್ತು ಮಕ್ಕಳ ರಕ್ಷಣಾ ನೀತಿ-2016ನ್ನು ಅನುಷ್ಠಾನಗೊಳಸುವ ಜೊತೆಗೆ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ಸಂಬAಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳಾದ ಮಂಜುನಾಥ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ನಿಲೋಫರ್ ಎಸ್ ರಾಂಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಗಂಗಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ರೋಹಿಣಿ ಕೊಟಗಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….