

ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆ, ಕೊಪ್ಪಳ ಸೆಪ್ಟೆಂಬರ್ 06 : ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ದಡಾರ ರುಬೆಲ್ಲಾ ನಿರ್ಮೂಲನೆ ಅಭಿಯಾನವು ಕೊಪ್ಪಳ ಜಿಲ್ಲೆಯಲ್ಲಿ ಸಹ ಸರಿಯಾಗಿ ಅನುಷ್ಠಾನವಾಗಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಡಿಯಲ್ಲಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಕುರಿತು ಸೆಪ್ಟೆಂಬರ್ 6ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆಯುವ ಮಿಷನ್ ಇಂದ್ರಧನುಷ್ ಅಭಿಯಾವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಈ ನಿಟ್ಟಿನಲ್ಲಿ ಅಂತರ ಇಲಾಖೆಗಳ ಸಮನ್ವಯ ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ದಡಾರ ಮತ್ತು ರುಬೆಲ್ಲಾ ರೋಗ ನಿರೋಧಕತೆಯ ಅಂತರ ಕಡಿಮೆ ಮಾಡುವುದು, ಗರ್ಭಿಣಿಯರು ಮತ್ತು 5 ವರ್ಷದೊಳಗಿನ ಎಲ್ಲ ಮಕ್ಕಳು ಬಾಕಿ ಇರುವ ಲಸಿಕಾ ಡೋಸಗಳನ್ನು ಪಡೆಯುವುದು, ಸಮುದಾಯ ಪಾಲ್ಗೊಲ್ಳುವಿಕೆ, ಹೊಸ ಲಸಿಕೆಗಳ ಪ್ರಗತಿ ಹೆಚ್ಚಿಸುವ ತೀವ್ರತರವಾದ ಮಿಷನ್ ಇಂದ್ರಧನುಷ್ ಅಭಿಯಾನಕ್ಕೆ ಆರೋಗ್ಯ ಇಲಾಖೆಯ ಜೊತೆಗೆ ವಿವಿಧ ಇಲಾಖೆಗಳು ಕೈಜೋಡಿಸಬೇಕು ಎಂದರು.
ಗರ್ಭಿಣಿಯರು ಮತ್ತು 5 ವರ್ಷಗಳ ಮಕ್ಕಳ ಮಾಹಿತಿ, ಲಸಿಕೆ ಪಡೆಯಬೇಕಾಗಿರುವ ಪಡೆಯದ ಬಿಟ್ಟು ಹೋದ ಬಗ್ಗೆ ಪಟ್ಟಿ ಮಾಡಲು, ತಾಯಂದಿರ ಸಭೆಗಳಲ್ಲಿ ಲಸೀಕಾಕರಣದ ಬಗ್ಗೆ ಜಾಗೃತಿ ಮೂಡಿಸಲು, ಅಭಿಯಾನದ ಸಮಯದಲ್ಲಿ ಅಂಗನವಾಡಿ ಕೇಂದ್ರಗಳನ್ನು ಸಿದ್ದಪಡಿಸಲು ಮತ್ತು ಅಭಿಯಾನದ ಬಗ್ಗೆ ಸೂಕ್ತ ಮೇಲ್ವಿಚಾರಣೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಮತ್ತು ಸಿಡಿಪಿಓಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳು ಸಮುದಾಯ ಸಭೆಗಳನ್ನು ನಡೆಸಿ, ಟಾಂಟಾಂನಲ್ಲಿ ಮೈಕಿಂಗ್ ಅಳವಡಿಸಿ, ಭಿತ್ತಿ ಪತ್ರ ಅಂಟಿಸಿ ಜಾಗೃತಿ ಮೂಡಿಸಬೇಕು. ಲಸಿಕೆಯನ್ನು ನಿರಾಕರಿಸುವ ಕುಟುಂಬಗಳ ಮನವೊಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯ ಅಧಿಕಾರಿಗಳು ಸ್ಲಮ್‌ಗಳಲ್ಲಿ ನಗರ ಪ್ರದೇಶಗಳ ಹೊರವಲಯದಲ್ಲಿ ಅಭಿಯಾನ ನಡೆಸಬೇಕು. ನಗರ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಂದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಲಸಿಕಾಕರಣಕ್ಕೆ ಸಹಕರಿಸಬೇಕು. ಭಿತ್ತಿ ಪತ್ರ, ಮೈಕಿಂಗ್ ಅಳವಡಿಸಿ ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಿದರು.

ಹೊಸದಾಗಿ ಮಕ್ಕಳನ್ನು ಶಾಲೆಗೆ ನೋಂದಣಿ ಮಾಡಿಕೊಳ್ಳುವ ಸಮಯದಲ್ಲಿ ಈ ಹಿಂದೆ ಪಡೆದಿರುವ ಲಸಿಕೆಗಳ ಪರಿಶೀಲನೆ ಮಾಡಿ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರಿಗೆ ಪ್ರೇರೇಪಿಸಬೇಕು. ಶಾಲಾ ಮಕ್ಕಳಿಂದ ಜಾಥಾ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು. ಗುತ್ತಿಗೆದಾರ ಸಂಘಗಳಿಗೆ ಈ ಅಭಿಯಾನದ ಬಗ್ಗೆ ಮಾಹಿತಿ ನೀಡಿ ಅವರ ಮೂಲಕ ಲಸೀಕಾಕರಣದ ಜಾಗೃತಿ ಮೂಡಿಸಬೇಕು. ಕಟ್ಟಡ ಕಾರ್ಮಿಕರ ಪ್ರದೇಶಗಳ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ಒದಗಿಸಿ ಲಸಿಕಾಕರಣ ಬಿಟ್ಟು ಹೋಗಿರುವ ಮತ್ತು ಲಸಿಕಾಕರಣದಿಂದ ವಂಚಿತರಾಗಿರುವ ಮಕ್ಕಳನ್ನು ಗುರುತಿಸಿ ಅವರ ಮಾಹಿತಿಯನ್ನು ಆರೋಗ್ಯ ಇಲಾಖೆಗೆ ನೀಡಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಲಸೀಕಾಕರಣ ಕಾರ್ಯಕ್ರಮದ ಬಗ್ಗೆ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ದೂರದರ್ಶನ, ಆಕಾಶವಾಣಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನಡೆಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಲಸಿಕಾ ಸತ್ರಗಳನ್ನು ತೆರೆದು ಲಸಿಕೆ ನೀಡಬೇಕು. ಎಇಎಫ್‌ಐ ಪ್ರಕರಣ ನಿರ್ವಹಣೆ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಅಲ್ಪಸಂಖ್ಯಾತರ ಸಮುದಾಯಗಳಲ್ಲಿ ಲಸಿಕಾಕರಣದ ಬಗ್ಗೆ ಜಾಗೃತಿ ಮೂಡಿಸಬೇಕು. ಲಸಿಕೆಯನ್ನು ನಿರಾಕರಿಸುವ ಕುಟುಂಬಗಳ ಮನವೊಲಿಸಬೇಕು. ಎಲ್ಲಾ ಮಕ್ಕಳು ಮತ್ತು ಗರ್ಭಿಣಿಯರು ಪೂರ್ಣ ಪ್ರಮಾಣದ ಲಸಿಕಾಕರಣ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನೆಹರು ಯುವ ಕೇಂದ್ರ ಮತ್ತು ರಾಷ್ಟಿçಯ ಸೇವಾ ಯೋಜನೆಯ ಮೂಲಕ ಲಸಿಕಾಕರಣದ ಬಗ್ಗೆ ಜಾಗೃತಿ ಕಾರ್ಯಕ್ರಮ ಆಯೋಜಿಸಬೇಕು. ಈ ಅಭಿಯಾನದಲ್ಲಿ ಪಾಲುದಾರರ ಮತ್ತು ಎನ್‌ಜಿಓಗಳ ಪಾತ್ರ ಅವಶ್ಯವಿದ್ದು, ಸಂವಹನ ಮತ್ತು ಮೇಲ್ವಿಚಾರಣೆಗೆ ಯುನಿಸೆಫ್ ಕೂಡ ಸಹಕಾರ ನೀಡಬೇಕು. ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ರೋಟರಿ, ಐಎಂಎ, ಈಎಪಿ ಹಾಗೂ ಇತರೆ ಎನ್‌ಜಿಓಗಳ ಸಹಕಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳ ಮನವಿ: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನುಸಾರ ವಯಸ್ಸಿಗನುಗುಣವಾಗಿ ಲಸಿಕೆ ಪಡೆಯದ ಅಥವಾ ಬಿಟ್ಟುಹೋದ ಅಥವಾ ವಂಚಿತ ಮತ್ತು ಲಸಿಕಾಕರಣಕ್ಕೆ ಬಾಕಿ ಇರುವ ಗರ್ಭಿಣಿಯರು ಹಾಗೂ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತೀವ್ರತರವಾದ ಮಿಷನ್ ಇಂದ್ರಧನುಷ್ 5.0 ರಲ್ಲಿ ಲಸಿಕೆ ನೀಡಲಾಗುತ್ತದೆ. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳು, ಉಪ ಕೇಂದ್ರಗಳು ಮತ್ತು ಅಂಗನವಾಡಿಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಆದ್ದರಿಂದ ‘ಕೆಲಸ ಕಾಯಬಹುದು; ಆದರೆ ನಮ್ಮ ಮಗುವಿಗೆ ಲಸಿಕಾಕರಣ ಮಾಡಿಸುವುದಕ್ಕೆ ಕಾಯುವುದಿಲ್ಲ! ನಾವು ನಮ್ಮ ಮಕ್ಕಳಿಗೆ ತಕ್ಷಣ ಲಸಿಕೆ ಹಾಕಿಸುತ್ತೇವೆ’ ಎನ್ನುವ ಸಂಕಲ್ಪದೊಂದಿಗೆ ಲಸೀಕಾಕರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ ಆಗಸ್ಟ್ 7ರಿಂದ 12ರವರೆಗೆ ಲಸಿಕಾಕರಣ ನಡೆದಿದೆ. ಈಗ ಮತ್ತೆ ಸೆಪ್ಟೆಂಬರ್ 11ರಿಂದ ಸೆಪ್ಟೆಂಬರ್ 16ರವರೆಗೆ ಮತ್ತು ಅಕ್ಟೊಬರ್ 9 ರಿಂದ ಅಕ್ಟೋಬರ್ 14ರವರೆಗೆ ಈ ಅಭಿಯಾನ ನಡೆಯಲಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ನಡೆಸಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಲಿಂಗರಾಜ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ ವಿ ಅವರು ಪ್ರಾತ್ಯಕ್ಷಿಕೆಯ ಮೂಲಕ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಗಂಗಪ್ಪ, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ಪಪ್ಪ ಹೊಸಮನಿ ಹಾಗು ವಿವಿಧ ಆರೋಗ್ಯ ಕಾರ್ಯಕ್ರಮಗಳ ಜಿಲ್ಲಾ ಅನುಷ್ಠಾನಾಧಿಕಾರಿಗಳು ಮತ್ತು ವಿವಿಧ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಇನ್ನೀತರರು ಇದ್ದರು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….