

ಕೊಪ್ಪಳ ಸೆಪ್ಟೆಂಬರ್ 14 : ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬಾಲ ನ್ಯಾಯ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಮಾದಕ ದ್ರವ್ಯ, ವಸ್ತುಗಳ ದುಷ್ಪರಿಣಾಮಗಳ ಕುರಿತು ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ವಿದ್ಯಾಲಯದಲ್ಲಿ ಸೆಪ್ಟೆಂಬರ್ 14ರಂದು ಜಾಗೃತಿ ಕಾರ್ಯಕ್ರಮ ನಡೆಯಿತು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಚಂದ್ರಶೇಖರ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ಸಾಮಾನ್ಯವಾಗಿ ಮಾದಕ ಪದಾರ್ಥಗಳ ಸೇವನೆಯು ಅತೀ ಹತ್ತಿರದ ಸ್ನೇಹಿತರ ಪ್ರಲೋಭನೆಗೆ ಒಳಗಾಗಿ ಆರಂಭವಾಗಿ ನಂತರ ಚಟವಾಗಿ ಪರಿಣಮಿಸುತ್ತದೆ. ಮಾದಕ ಪದಾರ್ಥಗಳ ಸೇವನೆಯಿಂದ ಅಲ್ಪಾವಧಿ ಮತ್ತು ದೀರ್ಘಾವಧಿ ಗಂಭೀರ ತೀವ್ರತರವಾದ ಆರೋಗ್ಯದ ಮತ್ತು ಮಾನಸಿಕ ಸಮಸ್ಯೆಗಳು ಕಂಡುಬರುತ್ತವೆ. ಇದರಿಂದ ವ್ಯಕ್ತಿಯ ಸಮಸ್ಯೆಯೊಂದಿಗೆ ಇದು ಕುಟುಂಬಕ್ಕೂ ಮಾರಕವಾಗಿ ಪರಿಣಮಿಸುತ್ತದೆ. ಆದ್ದರಿಂದ “ಜೀವನವನ್ನು ಆಯ್ದುಕೊಳ್ಳಿ, ಮಾದಕ ಪದಾರ್ಥಗಳನ್ನು ಅಲ್ಲ” ಎಂಬುದನ್ನು ಅರಿಯಬೇಕು. ದೇಶದ ಜವಾಬ್ದಾರಿಯುತ ಪ್ರಜೆಗಳಾದ ನಾವುಗಳು ಮಾದಕ ದ್ರವ್ಯ, ವಸ್ತುಗಳ ದುಷ್ಪರಿಣಾಮಗಳ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಮಾತನಾಡಿ, ಕೋಟ್ಪಾ ಕಾಯ್ದೆಯನ್ವಯ ಶೈಕ್ಷಣಿಕ ಸಂಸ್ಥೆಗಳ 100 ವ್ಯಾಸದೊಳಗಿನ ಪ್ರದೇಶದಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನವನ್ನು ಮಾರಾಟ ಮಾಡುವಂತಿಲ್ಲ. ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರನ್ವಯ 18 ವರ್ಷದೊಳಗಿನ ಮಕ್ಕಳಿಗೆ ಮಾದಕ ವಸ್ತುಗಳನ್ನು ನೀಡುವಂತಿಲ್ಲ. ಈ ಕಾಯ್ದೆಗಳ ಮುಖ್ಯ ಉದ್ದೇಶ ಮಕ್ಕಳು ಯಾವುದೇ ರೀತಿಯ ಮಾದಕ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಿರುವುದರೊಂದಿಗೆ, ಮಕ್ಕಳಿಗೆ ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗದಂತೆ ಮಾಡುವುದಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇರ್ಶಕರಾದ ತಿಪ್ಪಣ್ಣ ಶಿರಸಂಗಿ ಅವರು ಮಾತನಾಡಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನವದೆಹಲಿರವರ ಸೂಚನೆಯಂತೆ “ನಶೆಯ ವಿರುದ್ಧ ಒಂದು ಯುದ್ಧ” ಎಂಬ ಘೋಷ ವಾಕ್ಯದನ್ವಯ ಜಿಲ್ಲೆಯಲ್ಲಿ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಾದಕ ಪದಾರ್ಥ ವ್ಯಸನಿಗಳಾದ 18 ವರ್ಷದೊಳಗಿನ ಮಕ್ಕಳ ಪುನರ್ವಸತಿಗಾಗಿ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಆಂಜನೇಯ ಡಿ.ಎಸ್ ಅವರು ಅಂತರ್ಜಾಲ ಅಪರಾಧಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.

ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಅಮರೇಶ ಹುಬ್ಬಳ್ಳಿ ಅವರು, ನಾರ್ಕೋಟಿಕ್ ಡ್ರಗ್ಸ್ & ಸೈಕೊಟ್ರೋಪಿಕ್ ಸಬಸ್ಟೇನ್ಸ್ ಕಾಯ್ದೆ-1985ರ ಕುರಿತು ಉಪನ್ಯಾಸ ನೀಡಿದರು.
ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ವೀರೇಶಕುಮಾರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ. ಕಣವಿ, ಉಪಾಧ್ಯಕ್ಷರಾದ ದಿವಾಕರ್ ಜಿ ಬಾಗಲಕೋಟೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿ ನಿರ್ಮಲಾ ಪ್ರಾರ್ಥಿನಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಲೀಲಾ ವನ್ನೂರು ಕಾರ್ಯಕ್ರಮ ನಿರೂಪಿಸಿದರು. ರವಿಕುಮಾರ ಪವಾರ ಸ್ವಾಗತಿಸಿದರು. ರವಿ ಬಡಿಗೇರ ವಂದಿಸಿದರು.
ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು