

ಕೊಪ್ಪಳ : ರಾಷ್ಟ್ರೀಯ ವೈರಲ್ ಹೆಪಟೈಟಿಸ್ ಕಾರ್ಯಕ್ರಮದಡಿ ಜಿಲ್ಲಾಮಟ್ಟದ ವಿಶ್ವ ಹೆಪಟೈಟಿಸ್ ದಿನಾಚರಣೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಲಿಂಗರಾಜು ಟಿ ಅವರ ಅಧ್ಯಕ್ಷತೆಯಲ್ಲಿ ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ದಿ ಪೋಚುನ್ ಹೋಟೆಲಿನಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಇದೆ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮಾತನಾಡಿ, ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣಾ ಕಾರ್ಯಕ್ರಮವು ಸರಕಾರದ ಹೊಸ ಯೋಜನೆಯಾಗಿದ್ದು, ಹೆಪಟೈಟಿಸ್ ಎ.ಬಿ.ಸಿ.ಡಿ. ಮತ್ತು ಇ ಅನ್ನು ತಡೆಗಟ್ಟುವ, ನಿಯಂತ್ರಣ ಮಾಡುವ ಕಾರ್ಯಕ್ರಮವಾಗಿದೆ. ಹೆಚ್ಚಿನ ಅಪಾಯದ ಗುಂಪಿಗೆ ಸೇರಿದ ಲೈಂಗಿಕವೃತ್ತಿ ನಿರತ ಮಹಿಳೆಯರು (ಎಫ್.ಎಸ್.ಡಬ್ಲ್ಯೂ), ಎಂ.ಎಸ್.ಎಂ., ಮಂಗಳಮುಖಿ (ಟಿಜಿ) ಮತ್ತು ಮಾದಕ ದ್ರವ್ಯ ವ್ಯಸನಿಗಳು (ಪಿ.ಡಬ್ಲ್ಯೂ.ಐ.ಡಿ) ಸೇರಿದ ಜನರಿಗೆ ಮತ್ತು ಸಾರ್ವಜನಿಕರಿಗೆ ಹಪೆಟೈಟಿಸ್ ಕಾಯಿಲೆಯ ಕುರಿತು ಅರಿವು ಮತ್ತು ಜಾಗೃತಿ ಮೂಡಿಸುವುದು ಅತೀ ಮುಖ್ಯವಾಗಿದೆ. ಕೊಪ್ಪಳದ ಕಿಮ್ಸ್ ಜಿಲ್ಲಾ ಬೋಧಕ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆಯನ್ನು ಮಾಡಿಸಿ, ಚಿಕಿತ್ಸೆಯನ್ನು ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ.ಶಶಿಧರ ಎ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಪಟೈಟಿಸ್ ಬಿ ವೈರಸ್ ಸಂಶೋಧನೆ ಮಾಡಿ, ರೋಗ ಪತ್ತೆಯ ವಿಧಾನ ಮತ್ತು ಈ ರೋಗದ ತಡೆಗೆ ಲಸಿಕೆ ಕಂಡುಹಿಡಿದ ವೈದ್ಯ ವಿಜ್ಞಾನಿ ಡಾ.ಬಾರೂಚ್ ಬ್ಲಂಬರ್ಗ್ ಅವರ ಜನ್ಮದಿನ ಜುಲೈ 28ರ ಸವಿನೆನಪಿಗಾಗಿ ‘ವಿಶ್ವ ಹೆಪಟೈಟಿಸ್ ದಿನ’ ವನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ 9,00,000 ಜನರು ಹೆಪಟೈಟಿಸ್ ಬಿ ಯಿಂದ ಅಸುನೀಗಿದ್ದಾರೆ. 3,25,000,000 ಜನರು ಸದ್ಯ ಪ್ರಪಂಚದಲ್ಲಿ ಸೋಂಕಿನೊಂದಿಗೆ ಬಳಲುತ್ತಿದ್ದಾರೆ. 250 ಮಿಲಿಯನ್ ಜನರು ಹೆಪಟೈಟಿಸ್ ಬಿ ವೈರಸನ ವಾಹಕರಾಗಿದ್ದಾರೆ. ಈ ರೋಗದಿಂದ ಬಳಲಿದವರಲ್ಲಿ 3,16,000 ಜನರು ಯಕೃತ್ ಕ್ಯಾನ್ಸರ್‌ನ್ನು ಹೊಂದಿದ್ದಾರೆ. ಸುಮಾರು 48 ಮಿಲಿಯನ್ ಭಾರತೀಯರು ಈ ಸೋಂಕಿನ್ನು ಹೊಂದಿರಬಹುದು ಎಂಬುದು ಅಂದಾಜು ಮಾಡಲಾಗಿದೆ. ಇದಕ್ಕೆ ಬಲಿಯಾದ ವಿಶ್ವದ ಪ್ರತಿಶತ 50ರಷ್ಟು ರೋಗಿಗಳು ಭಾರತೀಯರು ಎಂಬುದು ವಿಷಾಧನೀಯ ಸಂಗತಿಯಾಗಿದೆ ಎಂದು ಹೇಳಿದರು.
ಈ ಕಾಯಿಲೆಯನ್ನು ವೈರಲ್ ಹೆಪಟೈಟಿಸ್ ಎ, ಬಿ, ಸಿ, ಡಿ, ಇ, ಎಫ್, ಜಿ ಎಂದೆಲ್ಲಾ ಹೆಸರಿಸಲಾಗಿದೆ. ಹೆಪಟೈಟಿಸ್ ಎ ಮತ್ತು ಇ ಗಳಿಂದ ತಲೆದೋರುವ ಸೋಂಕು ಸಾಮಾನ್ಯವಾಗಿದ್ದು, ನಿರ್ದಿಷ್ಟ ಅವಧಿಯ ನಂತರ ಕಡಿಮೆಯಾಗಿಬಿಡುತ್ತದೆ. ಹೆಪಟೈಟಿಸ್ ಬಿ, ಸಿ, ಮತ್ತು ಡಿ ವೈರಸ್‌ಗಳ ಸೋಂಕು ಕಾಲಗತಿಸಿದಂತೆ ಆಳವಾಗಿ ಬೇರು ಬಿಡುತ್ತದೆ. ಯಕೃತ್ ಕ್ಯಾನ್ಸರ ಆಗುವ ಸಾಧ್ಯತೆ ಇದೆ. ಈ ವೈರಸ್ ಮುಖ್ಯವಾಗಿ ರಕ್ತ ಮತ್ತು ದೇಹದ ಇತರ ಸ್ರಾವಗಳಲ್ಲಿ ಕಂಡುಬರುತ್ತದೆ. ಹೆಪಟೈಟಿಸ್ ಬಿ (ಹೆಚ್.ಬಿ.ವಿ) ಪೀಡಿತ ವ್ಯಕ್ತಿಗಳ ಜೊಲ್ಲು, ವೀರ್ಯ, ಯೋನಿಸ್ರಾವ, ಬೆವರು, ಮೊಲೆಹಾಲು, ಕಣ್ಣೀರು ಹಾಗೂ ಗಾಯಗಳಿಂದ ಸೋರುವ ಸ್ರಾವಗಳಲ್ಲಿ ವೈರಸನ್ನು ಇನ್ನೊಬ್ಬರಿ ಹರಡಬಹುದಾಗಿದೆ. ಇದಕ್ಕೆ ಗರ್ಭಿಣಿಯರು ಹೆಚ್.ಬಿ.ವಿ. ಸೋಂಕು ಹೊಂದಿದ್ದರೆ, ವೈರಸ್‌ಗಳ ಸೋಂಕು ನವಜಾತ ಶಿಶುವಿಗೂ ಬರುವುದು. ಸೋಂಕಿನಿಂದ ಕೂಡಿದ ಸೂಜಿಗಳನ್ನು ಬಳಸಿ ಅಕ್ಯುಪಂಕ್ಚರ್ ಚಿಕಿತ್ಸೆ ನೀಡಿದಾಗ, ರೋಗ ಪೀಡಿತ ಗಂಡು ಅಥವಾ ಹೆಣ್ಣಿನನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದಾಗ ರೋಗ ವಿನಿಮಯವಾಗುವುದು. ಈ ಕಾಯಿಲೆಗೆ ನಿಶ್ವಿತ ಚಿಕಿತ್ಸೆ ಇಲ್ಲ, ಈಗ ಲಭ್ಯವಿರುವ ಚಿಕಿತ್ಸೆಯೆಂದರೆ ನೋವಿಗೆ ತಕ್ಕ ಚಿಕಿತ್ಸೆಯನ್ನು ನೀಡುವುದಾಗಿದೆ ಎಂದರು.

ಹೆಪಟೈಟಿಸ್ ಸೋಂಕಿನಿಂದ ರಕ್ಷಣೆ ನೀಡಬಲ್ಲ ಲಸಿಕೆಗಳು ಹುಟ್ಟಿದ ತಕ್ಷಣ ಹೆಪಟೈಟಿಸ್ ಬಿ ಲಸಿಕೆಯನ್ನು ಕೊಡಿಸುವುದು. ಮಗುವಿಗೆ ಆರು ವರ್ಷಗಳಾದ ನಂತರ 4 ರಿಂದ 6 ವಾರಗಳ ಅಂತರದಲ್ಲಿ ಮೂರು ಬಾರಿ ಪೆಂಟಾವ್ಹೆಲೆಂಟ ಲಸಿಕೆಯನ್ನು ನೀಡಬೇಕು. ಹೆಚ್ಚು ಅಪಾಯದ ಅಂಚಿನಲ್ಲಿರುವ ವೈದ್ಯರು, ಪ್ರಸೂತಿ ತಜ್ಞರು ಮತ್ತು ಈ ವಿಭಾಗದ ಇತರ ಸಿಬ್ಬಂದಿ, ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಕೆಲಸ ಮಾಡುವವರು, ರಕ್ತ ಭಂಡಾರದಲ್ಲಿ ಕಾರ್ಯನಿರ್ವಹಿಸುವವರು ತಪ್ಪದೇ ಹೆಪಟೈಟಿಸ್ ಬಿ ಲಸಿಕೆಯನ್ನು ತೆಗೆದುಕೊಳ್ಳಬೇಕು. ಆಸ್ಪತ್ರೆಗಳಲ್ಲಿ ಬಳಸುವ ಸೂಜಿ, ಸಿರಿಂಜು, ಶಸ್ತ್ರಚಿಕಿತ್ಸೆಯ ಸಲಕರಣೆಗಳನ್ನು ಸೂಕ್ತ ರೀತಿಯಿಂದ ಶುದ್ದೀಕರಣಗೊಳಿಸಬೇಕು. ರಕ್ತದಾನಿಯ ರಕ್ತದಲ್ಲಿ ಈ ವೈರಸ್ ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಬೇಕು. ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆರ್.ಸಿ.ಹೆಚ್. ಅಧಿಕಾರಿಗಳಾದ ಡಾ.ಪ್ರಕಾಶ ವಿ., ಜಿಲ್ಲಾ ಕುಷ್ಠರೋಗ ನಿರ್ಮೂಲನ ಅಧಿಕಾರಿಗಳಾದ ಡಾ.ಪ್ರಕಾಶ ಹೆಚ್., ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ.ವೆಂಕಟೇಶ, ಹಿರಿಯ ವೈದ್ಯರಾದ ಡಾ.ಗೌರಿಶಂಕರ, ಕಿಮ್ಸ್ ಸಹ ಪ್ರಾಧ್ಯಾಪಕರಾದ ಡಾ.ಶ್ರೀನಿವಾಸ ಜೂಟೂರ ಸೇರಿದಂತೆ ಡ್ಯಾಪ್ಕೋ ಸಿಬ್ಬಂದಿಗಳು ಮತ್ತು ಹೊಸಬೆಳಕು, ಸ್ನೇಹ ಮಹಿಳಾ ಸಂಘ, ಚೈತನ್ಯ ಸ್ವಯಂ ಸೇವಾ ಸಂಸ್ಥೆಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವೈರಲ್ ಹೆಪಟೈಟಿಸ್ ಕುರಿತು ತಪಾಸಣೆ ಮತ್ತು ಪರೀಕ್ಷೆಯನ್ನು ಮಾಡಲಾಯಿತು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….