


ದಾವಣಗೆರೆ :- ನ್ಯಾಮತಿ ತಾಲ್ಲೂಕು ಕುದುರೆಕೊಂಡ ಗ್ರಾಮದ ಬಳಿ ಜಮೀನಿನಲ್ಲಿ ಒಣ ಗಾಂಜಾ ಹಾಗೂ ಅಡಿಕೆ ತೋಟವೊಂದರಲ್ಲಿ ಬೆಳೆದಿದ್ದ ಗಾಂಜಾ ಗಿಡಗಳಿಂದ ಹಸಿ ಗಾಂಜಾ ವನ್ನು ಅಬಕಾರಿ ಇಲಾಖೆ ಪತ್ತೆ ಮಾಡಿ, ಜಪ್ತಿ ಮಾಡಿಕೊಂಡಿದ್ದು, ಆರೋಪಿತರು ನಾಪತ್ತೆಯಾಗಿದ್ದಾರೆ. ಅಬಕಾರಿ ಇಲಾಖೆ ತನಿಖೆ ಮುಂದುವರೆಸಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ, ಹೊನ್ನಾಳಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ನ್ಯಾಮತಿ ತಾಲ್ಲೂಕು ಕುದುರೆಕೊಂಡ ಗ್ರಾಮದ ರುದ್ರಪ್ಪ ಬಿನ್ ಸಣ್ಣ ತಿಮ್ಮಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ದಾಳಿ ನಡೆಸಿ ಶೋಧಿಸಿದ ಸಂದರ್ಭದಲ್ಲಿ ಮೆಕ್ಕೆಜೋಳ ದಿಂಡು ಸಂಗ್ರಹಿಸಿದ ಸ್ಥಳದಲ್ಲಿ ಬಕೆಟ್ ಒಂದರಲ್ಲಿ ಗಾಂಜಾ ಎಲೆ, ಗಾಂಜಾ ತೆನೆಯ ಪುಡಿ ಹಾಗೂ ಗಾಂಜಾ ಬೀಜಗಳ ಮಿಶ್ರಿತ ಒಟ್ಟು 268 ಗ್ರಾಂ ನಷ್ಟು ಒಣ ಗಾಂಜಾ ಪತ್ತೆ ಹಚ್ಚಿದ್ದು, ಜಪ್ತಿ ಮಾಡಿಕೊಂಡು, ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಾರೆ. ಆರೋಪಿ ನಾಪತ್ತೆಯಾಗಿದ್ದು, ತನಿಖೆ ಮುಂದುವರೆದಿದೆ.
ಇದೇ ಗ್ರಾಮದ ಲಕ್ಷ್ಮಪ್ಪ ಬಿನ್ ಗಿರಿಯಪ್ಪ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವುದು ಕಂಡುಬಂದಿದ್ದು, ಸುಮಾರು 134 ಗ್ರಾಂ ನಷ್ಟು ಹಸಿ ಗಾಂಜಾ ಜಪ್ತಿ ಮಾಡಿಕೊಂಡು, ಪ್ರಕರಣ ದಾಖಲಿಸಲಾಗಿದೆ. ಆರೋಪಿ ನಾಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ. ಹೀಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 268 ಗ್ರಾಂ ಒಣ ಗಾಂಜಾ ಮತ್ತು 134 ಗ್ರಾಂ ಹಸಿ ಗಾಂಜಾ ವಶಕ್ಕೆ ಪಡೆದಿದ್ದು, ಒಟ್ಟು 4500 ರೂ. ಗಳ ಅಂದಾಜು ಮೌಲ್ಯ ಮಾಡಲಾಗಿದೆ.
ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರು ಇವರ ನಿರ್ದೇಶನದಂತೆ, ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಸ್.ಆರ್. ಮುರುಡೇಶ್ ಹಾಗೂ ಅಬಕಾರಿ ನಿರೀಕ್ಷಕ ಗಿರೀಶ್ ಹೆಚ್.ಕೆ. ಅವರು ಕಳೆದ ಮಾ. 30 ರಂದು ನಡೆಸಿದ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.