

ದಾವಣಗೆರೆ; ಸೆ.15(ಕರ್ನಾಟಕ ವಾರ್ತೆ) : ಪಿಜಿಸಿಎಲ್ ಪವರ್‍ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಾಮಾಜಿಕ ಒಣೆಗಾರಿಕೆ ನಿಧಿಯಡಿ ಜಿಲ್ಲೆಯ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿವಿಧ ತರಹದ 102 ಪರಿಕರಗಳನ್ನು ಖರೀದಿಸಲು ರೂ.6.83 ಕೋಟಿಗಳಿಗೆ ಜಂಟಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದರು.

ಪಿಜಿಸಿಎಲ್ ಪವರ್‍ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಸಿ.ಎಸ್.ಆರ್.ನಿಧಿಯ ನಿರ್ದೇಶಕರಾದ ಕೆ.ಎನ್.ಓಂಕಾರಪ್ಪ, ಪವರ್‍ಗ್ರಿಡ್ ಜನರಲ್ ಮ್ಯಾನೇಜರ್ ಹರೀಶ್ ನಾಯರ್‍ರೊಂದಿಗೆ ಜಂಟಿ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿದರು. ದಾವಣಗೆರೆ ತಾಲ್ಲೂಕಿನ ಆಲುವರ್ತಿ, ಆನಗೋಡು, ಅಣಜಿ, ಐಗೂರು, ಕೊಡಗನೂರು, ಮಾಯಕೊಂಡ, ರಾಮಗೊಂಡನಹಳ್ಳಿ, ಚನ್ನಗಿರಿ ತಾ; ತ್ಯಾವಣಿಗಿ, ಬಸವಾಪಟ್ಟಣ, ದಾಗಿನಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರ್ಜಿಕಲ್ ಪರಿಕರಗಳು ಸೇರಿದಂತೆ ಆಕ್ಸಿಜನ್ ಸಿಲಿಂಡರ್, ಪೋಟೋ ತೆರಪಿ, ಅಲ್ಟ್ರಾಸೌಂಡ್ ಸೇರಿದಂತೆ ಚಿಕಿತ್ಸೆಗೆ ಅಗತ್ಯವಿರುವ 102 ವಿವಿಧ ಬಗೆಯ ಪರಿಕರಗಳನ್ನು ಒದಗಿಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಪೌಷ್ಟಿಕತೆ, ಆರೋಗ್ಯ, ಶುದ್ದ ಕುಡಿಯುವ ನೀರು ಪೂರೈಕೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಆದ್ಯತೆ ನೀಡುವ ಮೂಲಕ ಯಾರು ಸಹ ಚಿಕಿತ್ಸೆ ಲಭಿಸಲಿಲ್ಲ ಎಂಬ ಕಾರಣಕ್ಕೆ ಮರಣ ಹೊಂದಬಾರದೆಂಬ ಗುರಿಯೊಂದಿಗೆ ಸಿಎಸ್‍ಆರ್ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಜಿಲ್ಲಾ ಆಸ್ಪತ್ರೆಗೆ ಬೇಕಾದ ಎಲ್ಲಾ ಸಲಕರಣೆಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು ಇಲ್ಲಿ ಚಿಕಿತ್ಸೆಗೆ ಬಂದವರಿಗೆ ಯಾವುದೇ ಹಾನಿಯಾಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾ ಸರ್ಜನ್‍ಗೆ ಸೂಚನೆ ನೀಡಲಾಗಿದೆ ಎಂದರು.

ಪವರ್‍ಗ್ರಿಡ್ ಸಿಎಸ್‍ಆರ್ ನಿರ್ದೇಶಕರಾದ ಕೆ.ಎನ್.ಓಂಕಾರಪ್ಪನವರು ಮಾತನಾಡಿ ಈ ಹಿಂದೆ ರಸ್ತೆ ಅಭಿವೃದ್ದಿಗೆ ರೂ.2.85 ಕೋಟಿ ನೀಡಲಾಗಿದ್ದು ಒಟ್ಟು ಜಿಲ್ಲೆಗೆ ಈಗಾಗಲೇ 10.5 ಕೋಟಿ ಅನುದಾನ ಪವರ್‍ಗ್ರಿಡ್ ನಿಂದ ಬಂದಿರುತ್ತದೆ. ಇನ್ನೂ ಜಿಲ್ಲೆಗೆ 20 ರಿಂದ 30 ಕೋಟಿ ಅನುದಾನ ಬರಬೇಕಾಗಿದ್ದು ಯೋಜನೆಯನ್ನು ಸಲ್ಲಿಸಲಾಗಿದೆ. ಚಿಗಟೇರಿ ಆಸ್ಪತ್ರೆ ಇನ್ನೂ ಅಭಿವೃದ್ದಿ ಆಗಬೇಕಾಗಿದ್ದು ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಕಲಬುರಗಿ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಒಟ್ಟು ರಾಜ್ಯಕ್ಕೆ 100 ಕೋಟಿ ಅನುದಾನ ತರಬೇಕೆಂಬ ಗುರಿ ಹೊಂದಲಾಗಿದೆ ಎಂದರು.
ಪವರ್‍ಗ್ರಿಡ್ ಜನರಲ್ ಮ್ಯಾನೇಜರ್ ಹರೀಶ್ ನಾಯರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹಂತೇಶ್ ಉಪಸ್ಥಿತರಿದ್ದರು.