

ಚಿತ್ರದುರ್ಗ ಸೆ.07: ನಿಗದಿತ ಕಾಲಮಿತಿಯಲ್ಲಿ ನಾಗರಿಕರಿಗೆ ಸರ್ಕಾರದ ವಿವಿಧ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೊಂಡಿರುವ ಸಕಾಲ ಯೋಜನೆ ಕುರಿತು, ಆಶಾ ಕಾರ್ಯಕರ್ತೆಯರು ತಮ್ಮ ಮನೆ ಮನೆ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಆಶಾ ಕಾರ್ಯಕರ್ತೆಯರಿಗೆ ಸಕಾಲ ಯೋಜನೆ ಕುರಿತು ಏರ್ಪಡಿಸಿದ “ಸಕಾಲ ಅರಿವು-ಹರಿವು” ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಯ ಭೇಟಿಯ ಸಮಯದಲ್ಲಿ ಸಾರ್ವಜನಿಕರಿಗೆ ಸಕಾಲ ಯೋಜನೆಯಡಿಯ ಸೇವೆಗಳ ಕುರಿತು ಮಾಹಿತಿ ನೀಡಬೇಕು. ವಿವಿಧ ಯೋಜನೆಗಳ ಪಿಂಚಣಿಗಳು, ಜಾತಿ ಆದಾಯ ಪ್ರಮಾಣಪತ್ರ ಸೇರಿದಂತೆ ವಿವಿಧ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಗ್ರಾಮ ಒನ್, ಅಟಲ್ ಜನಸ್ನೇಹಿ ಕೇಂದ್ರ ಮುಂತಾದೆಡೆ ಸಕಾಲ ಯೋಜನೆಯಲ್ಲಿಯೇ ಅರ್ಜಿ ಸಲ್ಲಿಸಿ, ನಿಗದಿತ ಕಾಲಮಿತಿಯೊಳಗೆ ಸೇವೆ ಪಡೆಯಬಹುದು.

ಆಶಾ ಕಾರ್ಯಕರ್ತೆಯರು ನಗರ, ಗ್ರಾಮೀಣ ಪ್ರದೇಶಗಳಲ್ಲಿ ನೇರವಾಗಿ ಸಾರ್ವಜನಿಕರೊಂದಿಗೆ ಸಂವಹನ ನಡೆಸುವುದರಿಂದ, ಸಕಾಲ ಯೋಜನೆ ಕುರಿತು ಮಾಹಿತಿ ಹೊಂದಿರಬೇಕು, ಬಳಿಕ ಮನೆ ಮನೆ ಭೇಟಿ ಸಂದರ್ಭದಲ್ಲಿ ಸರ್ಕಾರದ ಯಾವ ಯಾವ ಇಲಾಖೆಗಳಲ್ಲಿ ಸಕಾಲ ಸೇವೆಗಳು ಇವೆ. ಅರ್ಜಿ ಸಲ್ಲಿಸುವ ಬಗೆ, ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೇ ಸಕಾಲ ಸೇವೆಯಡಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವ ಸಂಬಂಧ ಅರಿವು ಮೂಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಂಗನಾಥ್, ಡಾ. ಚಂದ್ರಶೇಖರ ಕಂಬಾಳಿಮಠ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಗುಂಪುಗಳ ಪ್ರತಿನಿಧಿಗಳು ಇದ್ದರು.
ಮಹೇಶ್ ಮಂಜುನಾಥ್ ಶರ್ಮಾ
ಉತ್ತರ ಕರ್ನಾಟಕ ವಿಶೇಷ ಮುಖ್ಯ ಜಿಲ್ಲಾ ವರದಿಗಾರು….