

ದಾವಣಗೆರೆ,(ಆಗಸ್ಟ್ 28 ) ಸರ್ಕಾರ ಸರ್ವರಿಗೂ ಸಮಪಾಲು, ಸಮಬಾಳು ಮತ್ತು ಜನರಿಗೆ ಅನುಕೂಲ ಕಲ್ಪಿಸಲು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಇವುಗಳ ಅನುಷ್ಠಾನದಲ್ಲಿ ದುರ್ಬಳಕೆಯಾಗದಂತೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಕೈಗಾರಿಕಾಭಿವೃದ್ದಿ ಆಯುಕ್ತರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣರವರು ಸೂಚನೆ ನೀಡಿದರು.
ಅವರು ಸೋಮವಾರ (ಆ.28) ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಬಳಸಿ ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ನೊಂದಣಿಯನ್ನು ಮಾಡಿಸಿ ಹಣ ದುರುಪಯೋಗ ಮಾಡಲಾಗುತ್ತದೆ ಎಂದು ಮಹಾಲೇಖಪಾಲಕರ ವರದಿ ಇದೆ. ಗೃಹಲಕ್ಷ್ಮಿ ಯೋಜನೆಯ ಹಲವು ಫಲಾನುಭವಿಗಳ ಹೆಸರಿಗೆ ಒಂದೇ ಖಾತೆಗೆ ಹಣ ಜಮಾ ಆಗುವಂತೆ ಹ್ಯಾಕ್ ಮಾಡಲಾಗುತ್ತದೆ. ಅದೇ ರೀತಿ ಅನ್ನಭಾಗ್ಯ ಯೋಜನೆಯಡಿ ಐದು ಕೆ.ಜಿ.ಅಕ್ಕಿಯ ಬದಲಾಗಿ ನಗದು ನೀಡಲಾಗುತ್ತಿದ್ದು ಈ ವೇಳೆಯು ದುರುಪಯೋಗ ಆಗುವ ಸಂಭವವಿರುತ್ತದೆ, ಅಧಿಕಾರಿಗಳು ಪ್ರತಿಯೊಂದು ಖಾತೆಯನ್ನು ಪರಿಶೀಲನೆ ನಡೆಸಿ ದುರುಪಯೋಗವಾಗದಂತೆ ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕೆಂದು ಸೂಚನೆ ನೀಡಿದರು.
ಸಮನ್ವಯತೆ; ಜಿಲ್ಲೆ ಉತ್ತಮ ಪ್ರಗತಿಯಲ್ಲಿದೆ, ಆದರೂ ಈ ವರ್ಷ ಬರದ ಛಾಯೆ ಇದ್ದು ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಅಥವಾ ಇಲಾಖೆಗಳಲ್ಲಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ವಿವರವನ್ನು ನನ್ನ ಗಮನಕ್ಕಾಗಲಿ, ಜಿಲ್ಲಾಧಿಕಾರಿಯವರ ಗಮನಕ್ಕಾಗಲಿ ತರಬೇಕು. ಸರ್ಕಾರದಿಂದ ಆಗಬೇಕಾದ ಎಲ್ಲಾ ಕೆಲಸಗಳನ್ನು ಸಮನ್ವಯತೆಯಿಂದ ಮಾಡಲಾಗುತ್ತದೆ ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಶಕ್ತಿ ಯೋಜನೆ; ಮಹಿಳೆಯರು ಸಾರಿಗೆ ನಿಗಮದ ಬಸ್‍ಗಳಲ್ಲಿ ಉಚಿತ ಪ್ರಯಾಣ ಯೋಜನೆಯಡಿ ದಾವಣಗೆರೆ ವಿಭಾಗದಿಂದ ಜೂನ್, ಜುಲೈ, ಆಗಸ್ಟ್ 24 ರ ವರೆಗೆ ಒಟ್ಟು 78,15,550 ಪ್ರಯಾಣಿಕರು ಸಂಚರಿಸಿದ್ದು 19.43 ಕೋಟಿ ನಿಗಮಕ್ಕೆ ಆದಾಯ ಬಂದಿರುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ. ವಿಭಾಗಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಈ ವೇಳೆ ಉಸ್ತುವಾರಿ ಕಾರ್ಯದರ್ಶಿಯವರು ಪ್ರಯಾಣಿಸುವಾಗ ಯಾವ ದಾಖಲೆಗಳನ್ನು ಪರಿಗಣಿಸಲಾಗುತ್ತದೆ ಎಂದಾಗ ಶಕ್ತಿ ಪ್ರಯಾಣ ರಾಜ್ಯದ ನಿವಾಸಿಗಳಿಗೆ ಮಾತ್ರ ಇದ್ದು ವಿಳಾಸದ ದೃಢೀಕರಣಕ್ಕಾಗಿ ಮಾತ್ರ ಆಧಾರ್ ಮತ್ತು ಇತರೆ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ ಎಂದರು.

ಈ ವೇಳೆ ಜಿಲ್ಲಾಧಿಕಾರಿಯವರು ಜಗಳೂರಿಗೆ ಸಂಜೆ ಸಮಯದಲ್ಲಿ ಬಸ್‍ಗಳು ಇರುವುದಿಲ್ಲ ಎಂಬ ದೂರುಗಳಿವೆ ಎಂದಾಗ ಜಗಳೂರಿಗೆ ಸಂಜೆ 7.30 ರ ವರೆಗೆ ಬಸ್‍ಗಳಿದ್ದು ಮುಂದಿನ ತಿಂಗಳು ನಿಗಮಕ್ಕೆ ಹೊಸ ಬಸ್‍ಗಳು ಬರಲಿದ್ದು ಎಲ್ಲೆಲ್ಲಿ ಕೊರತೆ ಇದೆ, ಅಂತಹ ಕಡೆ ಹೊಸ ಬಸ್‍ಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಗೃಹಲಕ್ಷ್ಮಿ; ಮನೆಯ ಒಡತಿ ಯಜಮಾನಿಗೆ ಮಾಸಿಕ ಎರಡು ಸಾವಿರ ನೀಡುವ ಯೋಜನೆ ಇದಾಗಿದ್ದು ಇದನ್ನು ಪಡೆಯಲು ರೇಷನ್ ಕಾರ್ಡ್, ಆಧಾರ್, ಬ್ಯಾಂಕ್ ಖಾತೆಯ ವಿವರ ಕಡ್ಡಾಯವಾಗಿರುತ್ತದೆ. ಜಿಲ್ಲೆಯಲ್ಲಿ 386716 ಗುರಿ ಇದ್ದು ಈಗಾಗಲೇ 324046 ಮಹಿಳೆಯರು ನೊಂದಣಿ ಮಾಡಿದ್ದು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆಗಸ್ಟ್ 30 ರಂದು ನೊಂದಣಿಯಾದ ಫಲಾನುಭವಿಗಳಿಗೆ ತಲಾ 2 ಸಾವಿರ ಅವರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್ ಸಭೆಗೆ ಮಾಹಿತಿ ನೀಡಿದಾಗ ಕಾರ್ಯದರ್ಶಿಯವರು ಒಂದೇ ಮೊಬೈಲ್‍ಗೆ ಅನೇಕ ಖಾತೆ, ಆಧಾರ್ ಲಿಂಕ್ ಇರುತ್ತದೆ, ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಗೃಹಜ್ಯೋತಿ; ದಾವಣಗೆರೆ ಜಿಲ್ಲೆಯಲ್ಲಿ 589364 ಬೆಸ್ಕಾಂ ಗ್ರಾಹಕರಿದ್ದು ಇದರಲ್ಲಿ ಈ ಯೋಜನೆಗೆ 405559 ಗ್ರಾಹಕರು ನೊಂದಾಯಿಸಿದ್ದಾರೆ. ಆಗಸ್ಟ್ 15 ರ ವರೆಗೆ 352131 ಗ್ರಾಹಕರಿಗೆ ಶೂನ್ಯ ಬಿಲ್ ನೀಡಲಾಗಿದೆ. ಗೃಹಜ್ಯೋತಿಗೆ ನೊಂದಾಯಿಸಲು ಅವರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಆನ್‍ಲೈನ್ ಮೂಲಕ ಯೋಜನೆಗೆ ನೊಂದಾಯಿಸಬಹುದು. ಇದಕ್ಕೆ ಯಾವುದೇ ಆದಾಯಮಿತಿ ಇರುವುದಿಲ್ಲ ಎಂದು ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.

ಅನ್ನಭಾಗ್ಯ; ಜಿಲ್ಲೆಯಲ್ಲಿ ಅಂತ್ಯೋದಯ ಪಡಿತರ ಚೀಟಿದಾರರು 45659, ಬಿಪಿಎಲ್ 331837 ಕಾರ್ಡ್‍ಗಳು ಮತ್ತು 45712 ಎಪಿಎಲ್ ಕಾರ್ಡ್‍ಗಳಿದ್ದು 719 ನ್ಯಾಯಬೆಲೆ ಅಂಗಡಿಗಳಿರುತ್ತವೆ. ಎಎವೈಗೆ 21 ಕೆಜಿ ಅಕ್ಕಿ, 14 ಕೆಜಿ ರಾಗಿ ಸೇರಿ 35 ಕೆ.ಜಿ.ಆಹಾರಧಾನ್ಯ ನೀಡಲಾಗುತ್ತಿದೆ. ಬಿಪಿಎಲ್‍ಗೆ ಪ್ರತಿ ಸದಸ್ಯರಿಗೆ 3 ಕೆಜಿ ಅಕ್ಕಿ, 2 ಕೆಜಿ ರಾಗಿ ಉಚಿತವಾಗಿ ನೀಡಿ 5 ಕೆ.ಜಿ ಅಕ್ಕಿಯ ಹಣವನ್ನು ನಗದಾಗಿ ಅವರ ಖಾತೆಗೆ ಪ್ರತಿಯೊಬ್ಬ ಸದಸ್ಯರಿಗೆ ರೂ.170 ರಂತೆ ಜಮಾ ಮಾಡಲಾಗುತ್ತಿದೆ. ಜುಲೈನಲ್ಲಿ 288207 ಕಾರ್ಡ್‍ನ 1032982 ಜನರಿಗೆ 16.67 ಕೋಟಿ ಜಮಾ ಮಾಡಲಾಗಿದೆ. ಆಗಸ್ಟ್‍ನಲ್ಲಿ 306418 ಕಾರ್ಡ್‍ನ 1112634 ಜನರಿಗೆ ಸುಮಾರು 17.77 ಕೋಟಿ ಹಣವನ್ನು ಜಮಾ ಮಾಡಲು ಅನುದಾನ ಬಿಡುಗಡೆಯಾಗಿದೆ. ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿದ 840, ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡದೇ ಇರುವ 671, ಬ್ಯಾಂಕಿಂಗ್ ಇ.ಕೆವೈಸಿ ಪೂರ್ಣಗೊಳಿಸದ 9260, ಕಳೆದ ಮೂರು ತಿಂಗಳಿನಿಂದ ಪಡಿತರ ಪಡೆಯದೇ ಇರುವ 14137 ಮತ್ತು ಬ್ಯಾಂಕ್ ಖಾತೆ ಹೊಂದದೇ ಇರುವ 170 ಕಾರ್ಡ್‍ದಾರರಿಗೆ ಡಿಬಿಟಿ ಮೂಲಕ ನಗದು ಹಣವನ್ನು ಪಾವತಿಸಿರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಸಭೆಗೆ ತಿಳಿಸಿದಾಗ ಜಿಲ್ಲಾಧಿಕಾರಿಯವರು ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಆಧಾರ್ ತಿದ್ದುಪಡಿ, ಇ.ಕೆವೈಸಿ ಮಾಡಿಸಿ ಉಳಿದ ಫಲಾನುಭವಿಗಳಿಗೂ ನಗದು ಜಮಾ ಮಾಡಲು ಕ್ರಮ ಕೈಗೊಳ್ಳಲು ತಿಳಿಸಿದರು.