ಜನರು ಮೆಚ್ಚುವಂತೆ ಕಾರ್ಯನಿರ್ವಹಿಸಿ* – *ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಲಕ್ಷ್ಮಣ ಸಂ. ಸವದಿ ಸಲಹೆ

*ಅಥಣಿ* : ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಬೇಕು. ಅಥಣಿ ಮತಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದರೊಂದಿಗೆ ತಮ್ಮ ಕೆಲಸ, ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದುಕೊಂಡು ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಈ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಬೇಕು ಎಂದು *ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ* *ಶ್ರೀ ಲಕ್ಷ್ಮಣ ಸಂ. ಸವದಿಯವರು* ಅಧಿಕಾರಿಗಳಿಗೆ ಸಲಹೆ ನೀಡಿದರು.

ಅವರು ಸೆ. 25ರಂದು ಪಟ್ಟಣದ ತಾ.ಪಂ. ಸಭಾಭವನದಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ, ಕೆಲಸ ಕಾರ್ಯಗಳನ್ನು ಪರಿಶೀಲಿಸಿ ಅಧಿಕಾರಿಗಳನ್ನುದ್ದೇಶಿ ಮಾತನಾಡಿದ ಅವರು, ಅಧಿಕಾರಿಗಳು ಸಾರ್ವಜನಿಕ ಕಾರ್ಯ ಮಾಡುವುದು ನಮಗೆ ಸಿಕ್ಕ ಒಂದು ಉತ್ತಮ ಅವಕಾಶವೆಂದು ಭಾವಿಸಿ ಜನರ ಸೇವೆ ಮಾಡಬೇಕು. ಜನರಿಗೆ ಒಳಿತು ಮಾಡುವ ಗುಣ, ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಹೊಂದಿರಬೇಕು.

ಇದರಿಂದ ಸಾರ್ವಜನಿಕ ವಲಯದಲ್ಲಿ ಅವರಿಗೆ ಒಳ್ಳೆಯ ಹೆಸರು ಬರುತ್ತದೆ. ಇಂತಹ ಅಧಿಕಾರಿಗಳಿಗೆ ಸಾರ್ವಜನಿಕರು ಹಾಗೂ ನಾನು ಯಾವತ್ತೂ ಸಹಕಾರ ನೀಡುತ್ತೇವೆ ಎಂದು ಹೇಳಿದರು.ಅಥಣಿ ಮತಕ್ಷೇತ್ರದಲ್ಲಿ ಪ್ರಮುಖವಾಗಿ ಏತ ನೀರಾವರಿ ಕಾಲುವೆಗಳ ನೀರು ಕಾಲುವೆಗಳ ಕೊನೆಯ ಭಾಗದ ರೈತರಿಗೂ ತಲುಪಬೇಕು. ರೈತರು ಮಳೆ ಕೈಕೊಟ್ಟರೆ ಕಾಲುವೆ ನೀರಾದರೂ ಬರುತ್ತದೆ ಎಂದು ನಂಬಿಕೊಂಡು ಬಿತ್ತನೆ ಮಾಡಿ ಬೆಳೆ ಬೆಳೆದಿದ್ದಾರೆ. ಆದರೆ, ಕೆಲವು ಪ್ರದೇಶಗಳಲ್ಲಿ ನೀರಿನ ಕೊರತೆಯಿಂದ ಬೆಳೆಗಳು ಬಾರದೇ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.

ಆದ್ದರಿಂದ ನೀರಾವರಿ ಇಲಾಖೆಯ ಅಧಿಕಾರಿಗಳು ಯಾವುದೇ ತಾಂತ್ರಿಕ ತೊಂದರೆ ಇದ್ದರೆ, ಶೀಘ್ರ ಅದನ್ನು ಸರಿಪಡಿಸಿಕೊಂಡು ಕಾಲುವೆಗಳಿಗೆ ಸಮರ್ಪಕ ನೀರು ಹರಿಯುವಂತೆ ನಿಗಾವಹಿಸಬೇಕು ಎಂದು ಸೂಚಿಸಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸರ್ಕಾರದ ಕೃಷಿ ಮಾಹಿತಿ, ಸಹಾಯಧನದ ಸೌಲಭ್ಯಗಳು ತಲುಪಬೇಕು.ಹೆಸ್ಕಾಂನವರು ರೈತರಿಗೆ ತೊಂದರೆಯಾಗದಂತೆ ವಿದ್ಯುತ್ ಪೂರೈಕೆ, ಟ್ರಾನ್ಸ್ ಫಾರ್ಮರ್‌ಗಳನ್ನು, ಅವಶ್ಯವಿದ್ದಲ್ಲಿ ನೂತನ ಟಿಸಿಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕು. ಶಿಕ್ಷಣ ಇಲಾಖೆಯಿಂದ ಬಡ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಬಿಸಿಯೂಟ, ಸೌಲಭ್ಯಗಳು ಸರಿಯಾಗಿ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಔಷಧೋಪಚಾರ ದೊರಕಬೇಕು. ಒಟ್ಟಿನಲ್ಲಿ ಸರ್ಕಾರಿ ಇಲಾಖೆಗಳು ಜನಸ್ನೇಹಿಯಾಗಿ ಕಾರ್ಯ ನಿರ್ವಹಣೆ ಮಾಡುವ ಮೂಲಕ ಅಧಿಕಾರಿಗಳು, ಸಿಬ್ಬಂದಿ ಜನರ ಮೆಚ್ಚುಗೆಗೆ ಪಾತ್ರರಾಗಬೇಕು. ಇಂತಹ ಪಾರದರ್ಶಕತೆ, ಮಾದರಿ ಆಡಳಿತದ ಮೂಲಕ ಅಥಣಿ ಮತಕ್ಷೇತ್ರವು ಗುರುತಿಸುವಂತಾದರೆ ನಾನು ನಿಮ್ಮೆಲ್ಲರನ್ನು ಹೆಮ್ಮೆಯಿಂದ ಗೌರವಿಸಿ ಅಭಿನಂದಿಸುತ್ತೇನೆ. ಆದ್ದರಿಂದ ತಾವೆಲ್ಲರೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ವಿನಂತಿಸುವುದಾಗಿ ಮಾನ್ಯ ಶಾಸಕರಾದ ಲಕ್ಷ್ಮಣ ಸಂ. ಸವದಿಯವರು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖೆಗಳ ಪ್ರಗತಿ ವರದಿಯನ್ನು ಶಾಸಕರಿಗೆ ತಿಳಿಸಿದರು. ಉಪವಿಭಾಗಾಧಿಕಾರಿ ಮಾಧವ ಗಿತ್ತೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಾನಂದ ಕಲ್ಲಾಪುರ, ತಹಸೀಲ್ದಾರ್ ರಾಜೇಶ ಬುರ್ಲಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಪಶು ವೈದ್ಯಕೀಯ ಇಲಾಖೆಯ ನೂತನ ಪಶು ಚಿಕಿತ್ಸಾ ವಾಹನಕ್ಕೆ ಚಾಲನೆ ನೀಡಲಾಯಿತು. *ಆಕಸ್ಮಿಕವಾಗಿ ನಿಧನ ಹೊಂದಿದ ಮೂವರು ರೈತ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಹಾಗೂ ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ರೈತರಿಗೆ ತಲಾ 5 ಲಕ್ಷ ರೂ. ಪರಿಹಾರಧನದ ಆದೇಶದ ಪ್ರತಿಯನ್ನು ಅವರ ಕುಟುಂಬಸ್ಥರಿಗೆ ಶಾಸಕರು ಹಸ್ತಾಂತರಿಸಿದರು.

ಮಹೇಶ್ ಮ್ ಶರ್ಮಉತ್ತರ ಕರ್ನಾಟಕದ ವಿಶೇಷ ವರದಿಗಾರರು

  • Related Posts

    ಚಿಕ್ಕೋಡಿ : ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ..

    ಕರವೇ ಸದಸ್ಯತ್ವ ಅಭಿಯಾನಕ್ಕೆ ಚಿಕ್ಕೋಡಿ ಪಟ್ಟಣದ ಸಂಪಾದನಾ ಚರಮೂರ್ತಿ ಮಠದ ಶ್ರೀ ಗಳು ಚಾಲನೆ ನೀಡಿದರು, ಚಿಕ್ಕೋಡಿ ತಾಲೂಕಿನ ಕರವೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಶ್ರೀ ಮಠದಲ್ಲಿ ತಾಲೂಕಾ ಅಧ್ಯಕ್ಷರಾದ ಸಂಜು ಬಡಿಗೇರ ಮತ್ತು ಉಪಾಧ್ಯಕ್ಷರಾದ ಸಂತೋಷ ಪೂಜಾರಿ ಇವರ ನೇತೃತ್ವದಲ್ಲಿ…

    ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿನೆ

    ಕೇಂದ್ರ ಜಲಶಕ್ತಿ ತಂಡದ ನೋಡಲ್ ಅಧಿಕಾರಿ ಶ್ರೀ ಡಿ.ವಿ. ಸ್ವಾಮಿ (IAS) ಹಾಗೂ ಸೆಂಟ್ರಲ್ ಗ್ರೌಂಡ ವಾಟರ್ ಬೋರ್ಡ್ ವಿಜ್ಞಾನಿ ಡಾ.ಸುಚೇತನಾ ಬಿಸ್ವಾಸ್ ರವರು ಇಂದು ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನಲ್ಲಿ ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳಿಗೆ ಭೇಟಿ ನೀಡಿ…

    Leave a Reply

    Your email address will not be published. Required fields are marked *

    error: Content is protected !!