

ಸೆ. 15, ಜಗತ್ತಿನ ಅತ್ಯಂತ ಶ್ರೇಷ್ಠ ಇಂಜಿನಿಯರುಗಳ ಸಾಲಿನಲ್ಲಿ ನಿಲ್ಲುವ, ನಮ್ಮ ಸ್ವತಂತ್ರ ಭಾರತದ ಪ್ರಪ್ರಥಮ ಇಂಜಿನಿಯರ್ ಅಂತಲೇ ಹೇಳಬಹುದಾದಂಥ ಸರ್ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ೧೬೩ನೇ ಜಯಂತಿಯು ಭದ್ರಾವತಿಯ ಜನ್ನಾಪುರದಲ್ಲಿರುವ ಶ್ರೀ ಮಲ್ಲೇಶ್ವರ ಸಮುದಾಯ ಭವನದಲ್ಲಿ ನಡೆಯಿತು.

ಇಡೀ ಸಭಾಂಗಣವೇ ತುಂಬಿ ತುಳುಕುವಷ್ಟು ಜನ ಅಲ್ಲಿ ಸೇರಿದ್ದೇ, ಶ್ರೀ ವಿಶ್ವೇಶ್ವರಯ್ಯನವರು ಇಷ್ಟು ವರ್ಷಗಳ ನಂತರವೂ ಹೇಗೆ ಇನ್ನೂ ನಮ್ಮೆಲ್ಲರ ಮನಸ್ಸಿನಲ್ಲಿ ಪ್ರೀತಿಯಿಂದ ಉಳಿದುಕೊಂಡಿದ್ದಾರೆ ಅನ್ನುವುದಕ್ಕೆ ಸಾಕ್ಷಿ.


ಭದ್ರಾವತಿಯವರ ಪಾಲಿಗಂತೂ ಸರ್‌ಎಂವಿ ಅವರು ಸಾಕ್ಷಾತ್ ದೇವರ ಹಾಗೆ. ಇವತ್ತಿನ ಸಮಾರಂಭದಲ್ಲಿ ಹಿರಿಯ ಚಿತ್ರನಟ, ಭದ್ರಾವತಿಯವರೇ ಆದ ಶ್ರೀ ದೊಡ್ಡಣ್ಣ ಅವರು, ವಿಐಎಸ್‌ಎಲ್‌ನ ನಿವೃತ್ತ ಕಾರ್ಮಿಕ ಕಲ್ಯಾಣ ಕೇಂದ್ರದ ಗೌರವಾಧ್ಯಕ್ಷ ಶ್ರೀ ಜೆ ಎಸ್ ನಾಗಭೂಷಣ ಅವರು, ಸರ್ ಎಂವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರಿ ಎಂ ಜಿ ಉಮಾಶಂಕರ್ ಅವರು, ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಶ್ರೀ ಬಿ ಜಿ ರಾಮಲಿಂಗಯ್ಯ ಅವರು, ಮುಂತಾದ ಅನೇಕ ಗಣ್ಯರು ಹಾಗೂ ವಿಐಎಸ್‌ಎಲ್‌ನ ನೂರಾರು ಕಾರ್ಮಿಕ ಬಂಧುಗಳು ಭಾಗವಹಿಸಿದ್ದರು.
ಎಲ್ಲರ ಬಾಯಲ್ಲೂ ಎಲ್ಲರ ಮನಸಲ್ಲೂ ಸರ್ ಎಂವಿ ಅವರದೇ ಮಾತು. ಜೊತೆಗೆ, ವಿಐಎಸ್‌ಎಲ್ ಮತ್ತೆ ತನ್ನ ವೈಭವದ ದಿನಗಳಿಗೆ ಮರಳಲಿ ಅನ್ನುವ ಹಾರೈಕೆ ಮತ್ತು ನಿರೀಕ್ಷೆಇತ್ತು.