

ದಾವಣಗೆರೆ : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2022-23ನೇ ಸಾಲಿನಲ್ಲಿ 1.33 ಕೋಟಿ ಲಾಭಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಹಾಲೇಶಪ್ಪ ಹೇಳಿದರು. ನಗರದ ಸರಕಾರಿ ನೌಕರರ ಭವನದಲ್ಲಿ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕ್‌ನ ಆಡಳಿತ ಮಂಡಳಿ ಕಾರ್ಯಕ್ರಮ ಉದ್ಘಾಟಿಸಿದ ನಂತರ ಮಾತನಾಡಿದರು. ಕೇಂದ್ರ ಸರಕಾರ ಎಲ್ಲ ವಿಧಧ ಕೃಷಿ ಸಾಲ ನೀಡುವ ಯೋಜನೆಗಳನ್ನು ಬ್ಯಾಂಕಿನಲ್ಲಿ ಜಾರಿಗೊಳಿಸಿ ಜಿಲ್ಲೆಯ ಸುಮಾರು 1 ಲಕ್ಷಕ್ಕಿಂತಲೂ ಅಧಿಕ ರೈತ ಸದಸ್ಯರುಗಳಿಗೆ ಅಲ್ಪಾವಧಿ ಹಾಗೂ ಮಧ್ಯಮಾವಧಿ ಸಾಲ ನೀಡಲಾಗಿದೆ. ಪ್ರತಿ ಸಂಘಕ್ಕೂ ಹೊಸ ಹಾಗೂ ಹೆಚ್ಚುವರಿ ಕೃಷಿ ಸಾಲ ನೀಡುವುದರೊಂದಿಗೆ ಜಿಲ್ಲೆಯ ಪ್ರತಿ ಸಹಕಾರ ಸಂಘವು ಸರಾಸರಿ ರೂ.3.75 ಕೋಟಿಗೂ ಅಧಿಕ ಕೃಷಿ ಸಾಲ ನೀಡಲಾಗಿದೆ ಎಂದರು.
ಪ್ರಸಕ್ತ 2022-2023ನೇ ಸಾಲಿನಲ್ಲಿ ರಾಜ್ಯ ಸರಕಾರ ಸೂಚನೆಯಂತೆ ರೂ.784 ಕೋಟಿಗಳ ಅಲ್ಪಾವಧಿ ಕೆಸಿಸಿ ಸಾಲ ಹಾಗೂ ಮಧ್ಯಮಾವಧಿ ಕೃಷಿ ಸಾಲ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಅದರಂತೆ ಇತ್ತೀಚಿನವರೆಗೆ ಒಟ್ಟಾರೆ 34538 ರೈತ ಸದಸ್ಯರಿಗೆ ರೂ.256.99 ಕೋಟಿಗಳ ಕೆಸಿಸಿ ಹಾಗೂ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದ್ದು, ಈ ಪೈಕಿ ರೂ.20.88 ಕೋಟಿಗಳ ಮೊತ್ತವನ್ನು ಹೊಸ ಸದಸ್ಯರುಗಳಿಗೆ ನೀಡಲಾಗಿದೆ. ಹಾಗೆಯೇ ಕಡಿಮೆ ಸಾಲ ಹೊಂದಿರುವ ರೈತ ಸದಸ್ಯರುಗಳಿಗೆ ಬೆಳೆ ಸಾಲದ ಮಿತಿಗೆ ಒಳಪಟ್ಟು ಹೆಚ್ಚುವರಿ ಸಾಲವನ್ನು ಸಹಕಾರ ಸಂಘಗಳ ಮೂಲಕ ನೀಡುತ್ತಾ ಬಂದಿದ್ದೇವೆ ಎಂದು ವಿವರಿಸಿದರು.

2021-2022 ನೇ ಸಾಲಿನಲ್ಲಿ ರೂ.111.31 ಕೋಟಿಗಳ ಹೊಸ/ ಹೆಚ್ಚುವರಿ ಕೃಷಿ ಸಾಲವನ್ನು ನೀಡಿದ್ದು, ಹಾಗೆಯೇ ಬ್ಯಾಂಕಿನ ಮೂಲಕ ಕೃಷಿಯೇತರ ಸಾಲ ವಿತರಣೆಯನ್ನು ಹೆಚ್ಚಿಸಿ ಬ್ಯಾಂಕಿನ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಇತ್ತೀಚಿನವರೆಗೆ ಒಟ್ಟಾರೆ ರೂ.305.49 ಕೋಟಿಗಳ ಕೃಷಿ ಹಾಗೂ ಕೃಷಿಯೇತರ ಸಾಲ ವಿತರಣೆ ಮಾಡಲಾಗಿದೆ. ಇದರಿಂದ ಬ್ಯಾಂಕಿನ ಸಿಬ್ಬಂದಿಗಳ ವೆಚ್ಚ ಮತ್ತು ಇತರೆ ವೆಚ್ಚಗಳ ನಿರ್ವಹಣೆಗೆ ಅನುಕೂಲಕರವಾಗಿದೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಗಳ ಜತೆ ಸಂಬಂಧ : ಕುಕ್ಕುವಾಡದ ದಾವಣಗೆರೆ ಶುಗರ್, ಶಾಮನೂರು, ದುಗ್ಗಾವತಿ ಶುಗರ್ ಕಾರ್ಖಾನೆಗಳು ಬ್ಯಾಂಕಿನಲ್ಲಿ ವ್ಯವಹರಿಸುತ್ತಿದೆ. ಇದರಿಂದ ಬ್ಯಾಂಕಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ಅಧ್ಯಕ್ಷ ಹಾಲೇಶಪ್ಪ ಹೇಳಿದರು.
ಏಳು ಹೊಸ ಶಾಖೆ : ಬಾಡ, ದಾವಣಗೆರೆ ಶಾಮನೂರು, ಪಲ್ಲಾಗಟ್ಟೆ, ಬಿಳಿಚೋಡು, ಪಾಂಡೋಮಟ್ಟಿ, ಹೊಳೆಸಿರಿಗೆರೆ, ಕುಂದೂರು ಸ್ಥಳಗಳಲ್ಲಿ ಏಳು ಡಿಸಿಸಿ ಬ್ಯಾಂಕ್‌ನ ಹೊಸ ಶಾಖೆ ಪ್ರಾರಂಭಿಸಲಾಗಿದೆ ಎಂದು ಅಧ್ಯಕ್ಷರು ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರಾದ ಉಪಾಧ್ಯಕ್ಷ ಬಿ.ಶೇಖರಪ್ಪ, ನಿರ್ದೇಶಕರಾದ ಡಾ.ಜೆ.ಆರ್.ಷಣ್ಮುಖಪ್ಪ, ಜೆ.ಎಸ್.ವೇಣುಗೋಪಾಲರೆಡ್ಡಿಘಿ, ಕೆ.ಎಚ್.ಷಣ್ಮುಖಪ್ಪ, ಜಗದೀಶಪ್ಪ ಬಣಕಾರ್, ಆರ್.ಜಿ.ಶ್ರೀನಿವಾಸಮೂತು, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ ಎಚ್.ಕೆ.ಪಾಲಾಕ್ಷಪ್ಪ, ವೃತ್ತಿಪರ ನಿರ್ದೇಶಕ ಜಿ.ಮುರುಗೇಂದ್ರಪ್ಪ, ಎಚ್.ದಿವಾಕರ್, ಸಹಕಾರ ಸಂಘಗಳ ಉಪನಿಬಂಧಕಿ ಎಚ್.ಅನ್ನಪೂರ್ಣ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎನ್.ನಂಜುಂಡೇಗೌಡ, ಮ್ಯಾನೇಜರ್ ತ್ಯಾವರ್‌ನಾಯ್ಕ್ ಸೇರಿದಂತೆ ಇತರರು ಇದ್ದರು.
*2022-2023 ಸಾಲಿನಲ್ಲಿ ಶೂನ್ಯ ಬಡ್ಡಿದರ : 103972 ರೈತರಿಗೆ 795 ಕೋಟಿ ಅಲ್ಪಾವಧಿ ಕೆಸಿಸಿ ಸಾಲ
*469 ಸದಸ್ಯರುಗಳಿಗೆ 40 ಕೋಟಿ ಮಧ್ಯಮಾವಧಿ ಕೃಷಿ ಸಾಲ ನೀಡಲು ಗುರಿ
*ಒಟ್ಟು 24 ಶಾಖೆ, 9 ಶಾಖೆ ಪ್ರಾರಂಭಕ್ಕೆ ನಬಾರ್ಡ್‌ಗೆ ಪ್ರಸ್ತಾವನೆ, ಆರ್‌ಬಿಐ ಅನುಮತಿ ಕಡ್ಡಾಯ
*ಕೇಂದ್ರ ಕಚೇರಿ ಕಟ್ಟಡಕ್ಕಾಗಿ ಶಿರಮಗೊಂಡನಹಳ್ಳಿ 20 ಗುಂಟೆ ಜಮೀನು, ಆಡಳಿತಾತ್ಮಕ, ತಾಂತ್ರಿಕ ಅನುಮತಿಗೆ ಪ್ರಸ್ತಾವನೆ
ಚರ್ಚೆಯಾದ ವಿಷಯಗಳು :
*44 ಲಕ್ಷ ಹಣ ಷೇರುದಾರರ ಬ್ಯಾಲೆನ್ಸ್‌ನಲ್ಲಿ ಇದ್ದು ಅದನ್ನು ಕಟ್ಟಡ ನಿಧಿಗೆ ಜಮಾ ಮಾಡಿ ಖರ್ಚು ತೋರಿಸಬೇಕಿತ್ತು. ಆದರೆ ಸಿಲ್ಕ್ (ಶುಲ್ಕ) ಉಳಿದಿದೆ ಎಂದು ತೋರಿಸಿದ್ದೀರಿ ಇದು ಹೇಗೆ ಎಂದು ಸದಸ್ಯ ಸಿರಿಗೆರೆ ರಾಜಣ್ಣ ಕೇಳಿದರು.
*ಮೊದಲಿಗೆ ಕಟ್ಟಡ ನಿಧಿಗೆ ಶೇ.2ರಷ್ಟು ಹಣ ಕಡಿತಮಾಡಿಕೊಂಡಿದ್ದುಘಿ, ಆ ಹಣ ಎಲ್ಲಿದೆ, ಇಷ್ಟೂ ದಿನವಾದರೂ ಯಾಕೆ ನಿರ್ಮಾಣಗೊಂಡಿಲ್ಲ. ಡಿವಿಡೆಂಟ್ ಕೊಡದೇ ಕಟ್ಟಡ ನಿಧಿಗೆ ಹಣ ಕಡಿತ ಮಾಡಿಕೊಂಡಿಕೊಂಡಿದ್ದು ಸರಿಯಿಲ್ಲ ಎಂದು ಸದಸ್ಯ ಚಂದ್ರಶೇಖರಯ್ಯ ಪ್ರಶ್ನಿಸಿದರು.
*ಹೊಸದಾಗಿ 48 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು, ಅವರಿನ್ನು ಪ್ರೋಭೇಷನರಿಯಲ್ಲಿ ಇದ್ದಾರೆ. ಈಗಲೇ ಅವರಿಗೆ 10 ರಿಂದ 12 ಲಕ್ಷ ಸಾಲ ಹೇಗೆ ನೀಡಿದ್ದೀರಿ. ಅದೇ ರೈತರು ಕೇವಲ 1 ಲಕ್ಷ ಸಾಲಕ್ಕೆ ಸಾಕಷ್ಟು ಬಾರಿ ಓಡಾಡಬೇಕಿದೆ. ಈ ಸಿಬ್ಬಂದಿಗಳಿಗೆ ಪ್ರೋಭೇಷನರಿ ಫೀರಿಯಡ್‌ನಲ್ಲಿ ಕೊಡಲು ಅವಕಾಶವಿಲ್ಲ ಹೇಗೆ ನೀಡಿದ್ದೀರಿ, ಬ್ಯಾಂಕ್‌ನ ಸಿಬ್ಬಂದಿಗಳನ್ನು ಯಾವ ಆಧಾರದ ಮೇಲೆ ನೇರನೇಮಕಾತಿ ಮಾಡಿಕೊಂಡಿದ್ದೀರಿ ಎಂದು ಸದಸ್ಯ ಮುದೇಗೌಡ್ರು ಗಿರೀಶ್ ಪ್ರಶ್ನಿಸಿದರು.