

( ಮಹಾರಾಷ್ಟ್ರ 02_) ಮಹಾರಾಷ್ಟ್ರ ದ ಜಲ್ನಾದಲ್ಲಿ ಮರಾಠ ಮೀಸಲಾತಿಗಾಗಿ ಆಗ್ರಹಿಸಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದು, ಸ್ಥಳದಲ್ಲಿ ಘರ್ಷಣೆ ಉಂಟಾಗಿದೆ.

ಅಂಬಾದ್ ತಹಸಿಲ್‌ನ ಅಂತರವಾಲಿ ಸಾರಥಿ ಗ್ರಾಮದಲ್ಲಿ ನಡೆದ ಘರ್ಷಣೆಯಲ್ಲಿ ಸುಮಾರು 20 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ ನಾಲ್ಕು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಹೆಚ್ಚುವರಿ ಎಸ್‌ಪಿ ಸೇರಿದಂತೆ 37 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಟನೆ ಘರ್ಷಣೆಗೆ ತಿರುಗಿದ ಹಿನ್ನೆಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಮತ್ತು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.ಕಳೆದ ಕೆಲವು ದಿನಗಳಿಂದ, ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಸ್ಥಳೀಯ ಮರಾಠ ನಾಯಕ ಮನೋಜ್ ಜಾರಂಗೆ ನೇತೃತ್ವದಲ್ಲಿ ನೂರಾರು ಪ್ರತಿಭಟನಾಕಾರರು ಅಂತರವಾಲಿ ಸಾರಥಿ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ಕುರಿತು ಜಲ್ನಾ ಎಸ್ಪಿ ತುಷಾರ್ ದೋಷಿ ಮಾಹಿತಿಯನ್ನು ನೀಡಿದ್ದು, ಘಟನೆ ಶುಕ್ರವಾರ ಸಂಜೆ 6 ರಿಂದ ರಾತ್ರಿ 8ರ ನಡುವೆ ನಡೆದಿದೆ. ಪ್ರತಿಭಟನಾಕಾರರು ದಿಡೀರ್ ಹಿಂಸಾಚಾರಕ್ಕೆ ಪ್ರಯತ್ನಿಸಿದ್ದಾರೆ. ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೆಲವು ಪ್ರತಿಭಟನಾಕಾರರಿಗೂ ಗಾಯಗಳಾಗಿದೆ. ಓರ್ವ ಎಸ್ಪಿ, ಇಬ್ಬರು ಡಿವೈಎಸ್ಪಿಗಳು ಸೇರಿ 37 ಪೊಲೀಸರಿಗೆ ಘಟನೆಯಲ್ಲಿ ಗಾಯಗಳಾಗಿದೆ.

ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠೀ ಚಾರ್ಜ್ ಮಾಡಿದ್ದಾರೆ. ಇದಾದ ಬಳಿಕವು ನಗರದ ವಿವಿಧೆಡೆ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿರುವುದು ಕಂಡು ಬಂದಿದೆ, ನಾವು ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸುತ್ತೇವೆ. ಆರೋಪಿಗಳನ್ನು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಬಂಧಿಸಲಾಗುವುದು ಘಟನೆಯ ಕುರಿತು ಎಕ್ಸ್‌ನಲ್ಲಿ(ಟ್ವಿಟ್ಟರ್) ಬರೆದಿರುವ ಶಿಂಧೆ, ಮರಾಠ ಮೀಸಲಾತಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆದಿರುವುದು ದುರದೃಷ್ಟಕರ. ಘಟನೆಯ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಮಾಹಿತಿ ಪಡೆದು ತನಿಖೆಗೆ ಆದೇಶಿಸಿದ್ದೇನೆ. ಶಾಂತಿ ಕಾಪಾಡುವಂತೆ ನಾನು ಜನರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.