

ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವವನ್ನು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದಾರೆ.
ಈ ಕುರಿತು ಇಂದು ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಬಾರಿ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ದಸರಾ ಮಹೋತ್ಸವ ಉದ್ಘಾಟಿಸಲಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರು ದಸರಾ ಹಿನ್ನೆಲೆ 2023ರ ಗಜಪಯಣ ಸೆಪ್ಟೆಂಬರ್ 1ಕ್ಕೆ ನಡೆಯಲಿದ್ದು, ಗಜ ಪಡೆಯ ಮೊದಲ ತಂಡ ಸೆಪ್ಟೆಂಬರ್ 1ಕ್ಕೆ ಮೈಸೂರಿಗೆ ಆಗಮಿಸಲಿವೆ.

ಈ ಬಾರಿಯ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಅಕ್ಟೋಬರ್ 15 ರ ಬೆಳಿಗ್ಗೆ 10.15 ರಿಂದ 10.30ರ ನಡುವೆ ಮೈಸೂರು ದಸರಾ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಯೋಜಿಸಲು ನಿರ್ಧರಿಸಲಾಗಿದೆ.

ಈ ಬಾರಿ ದೀಪಾಲಂಕಾರ, ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಲಿದೆ ಎಂದು ತಿಳಿದು ಬಂದಿದೆ.