ವರ ಮಹಾಲಕ್ಷ್ಮೀ ಹಬ್ಬದ ವಿಶೇಷತೆ ಮತ್ತು ಹಿನ್ನೆಲೆ,,

ಪ್ರತಿ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಈ ವರ ಮಹಾಲಕ್ಷ್ಮಿ ವ್ರತವನ್ನು ಎಲ್ಲಾ ಮಹಿಳೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ. ಭವಿಷ್ಯೋತ್ತರ ಪುರಾಣದ ಪ್ರಕಾರ, ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದಳೆಂದು ಹೇಳಲಾಗುತ್ತದೆ.

ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುತ್ತಾರೆ. ಈ ಎಲ್ಲಾ ಹಬ್ಬಗಳಲ್ಲಿ ವರಮಹಾಲಕ್ಷ್ಮೀ ಹಬ್ಬ ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು.

ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಉದ್ಭವಿಸುತ್ತಾಳೆ ಮಾತೆ ಲಕ್ಷ್ಮೀ.

ಹಾಗಾಗಿ ಈ ವರಮಹಾಲಕ್ಷ್ಮಿ ವ್ರತದ ದಿನ ತಾಯಿಗೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸುತ್ತಾರೆ. ಲಕ್ಷ್ಮೀ ಎಂದರೆ ಶುದ್ಧತೆಯ ಸಂಕೇತವಾಗಿರುವುದರಿಂದ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಅಭ್ಯಂಜನವನ್ನು ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ.

ಸಣ್ಣ ಉಕ್ಕಿನ ಬಿಂದಿಗೆ ಅಥವ ಬೆಳ್ಳಿ ಚೆಂಬನ್ನು ಕಳಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಿ ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಳಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಳಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿನ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಸೀರೆ, ಒಡವೆಗಳೊಂದಿಗೆ ಅಲಂಕರಿಸುತ್ತಾರೆ.

ಅವರವರ ಯಥಾಶಕ್ತಿಯಂತೆ ಲಕ್ಷ್ಮಿಯನ್ನು ಚಿನ್ನ, ಬೆಳ್ಳಿ, ಹೂವುಗಳೊಂದಿಗೆ ಅಲಂಕರಿಸಿ ಪೂಜಿಸುತ್ತಾರೆ. ತಾಯಿಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ತಾಯಿಗೆ ತುಂಬಾ ಪ್ರೀತಿ.

ಬಿಲ್ವವೃಕ್ಷದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆಂದು, ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ನಂಬಿಕೆಯೂ ಇದೆ. ವರ ಮಹಾಲಕ್ಷ್ಮೀ ಎಂದರೆ ವರಗಳನ್ನು ಕೊಡುವವಳು ಎಂದು ಕೂಡಾ ಹೇಳುತ್ತಾರೆ.

ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ ಎನ್ನುವುದು ನಂಬಿಕೆ. ಆದರೆ ಈ ಆಧುನಿಕ ಜೀವನದ ಒತ್ತಡದಲ್ಲಿ ಯಾರಿಗೂ ಉಪವಾಸ ಮಾಡಲು ಸಾಧ್ಯವಾಗದೇ ಇರುವುದರಿಂದ ಮುಂಜಾನೆಯಲ್ಲಿ ಯಾವುದೇ ಘನಹಾರ ಸೇವಿಸದೆ ವ್ರತವನ್ನಾಚರಿಸುತ್ತಾರೆ.

ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ.

ಹೀಗಾಗಿ ನಮ್ಮ ಪೂರ್ವಿಕರು ಹೇಳುವ ಮಾತೆಂದರೆ, ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು ತಾಂಡವವಾಡುತ್ತಾಳೆ ಎಂದು ಎಲ್ಲದಕ್ಕಿಂತ ಇಲ್ಲಿ ಭಕ್ತಿ ಹಾಗೂ ಶ್ರದ್ಧೆ ಮುಖ್ಯ.

ಇನ್ನು ವ್ರತದ ಬಗ್ಗೆ ಹೇಳಬೇಕೆಂದರೆ, ಒಮ್ಮೆ ವರ ಮಹಾಲಕ್ಷ್ಮಿ ವ್ರತ ಮಾಡಿದರೆ ಅಷ್ಟಲಕ್ಷ್ಮಿಯರಿಗೆ ಪೂಜೆ ಸಲ್ಲಿಸಿದಷ್ಟು ಫಲ ಸಿಗುತ್ತದೆಂದು ಹೇಳುತ್ತಾರೆ. ಲಕ್ಷ್ಮಿಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ.

ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಹಯಗ್ರೀವ, ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ.

ವ್ರತದ ನೇಮದ ಪ್ರಕಾರ ಪೂಜೆಯ ಸಿದ್ದತೆಗಳೆಲ್ಲ ಆದ ನಂತರ ಮೊದಲು ವಿಘ್ನನಿವಾರಕನಾದ ಗಣಪತಿಯನ್ನು ಪೂಜಿಸಿ ನಂತರ ಯಮುನಾ ಪೂಜೆ ಅಂದರೆ ಶ್ರೇಷ್ಠವಾದ ನದಿಯ ನೀರನ್ನು ತಂದು ಪೂಜೆ ಮಾಡುತ್ತಾರೆ.

ಇದಾದ ಮೇಲೆ ವರಮಹಾಲಕ್ಷ್ಮಿ ವ್ರತವನ್ನು ಆರಂಭಿಸುತ್ತಾರೆ. ಕುಂಕುಮಾರ್ಚನೆ ಮಾಡುವುದರೊಂದಿಗೆ ಲಕ್ಷ್ಮಿದೇವಿಯನ್ನು ಆವಾಹನೆ ಮಾಡುತ್ತಾರೆ. ನಂತರ ಹನ್ನೆರಡು ಗಂಟಿನ ದಾರವನ್ನು ದೇವರ ಮುಂದೆ ಇಟ್ಟು ಪುಜೆಯನ್ನು ಮಾಡಿ ಸುಮಂಗಲಿಯರು ಅವರ ಕೈಗೆ ಕಟ್ಟಿಕೊಳ್ಳುತ್ತಾರೆ.

ಕಟ್ಟಿದ ದಾರವನ್ನು ಗೌರಿಹಬ್ಬದ ದಿನ ಗೌರಿವ್ರತ ಮಾಡಿ ಹಳೇ ದಾರವನ್ನು ವಿಸರ್ಜಿಸಿ ಹೊಸ ದಾರವನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಮದುವೆಯಾದ ಹೆಣ್ಣು ಮಕ್ಕಳು ಮೊದಲನೆ ವರ್ಷದಿಂದ ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ ಒಂಬತ್ತನೇ ವರ್ಷ ಉದ್ಯಾಪನೆಯೊಂದಿಗೆ ವ್ರತವನ್ನು ಮುಗಿಸುತ್ತಾರೆ.

ಈ ವರಮಹಾಲಕ್ಷ್ಮೀ ಹಬ್ಬದ ಮತ್ತೊಂದು ವಿಶೇಷತೆಯೇನೆಂದರೆ ಜಾತಿ, ಮತ, ಭೇದವಿಲ್ಲದೆ ಹಿಂದೂ ಧರ್ಮದ ಎಲ್ಲರೂ ಆ ತಾಯಿಯನ್ನು ವಿವಿಧ ರೀತಿಯಲ್ಲಿ ಪೂಜಿಸಿ ಅವಳನ್ನು ಆರಾಧಿಸುತ್ತಾರೆ.

ಪೂಜೆಯ ನಂತರ ಶ್ರೀ ವರಮಹಾಲಕ್ಷ್ಮಿ ವ್ರತ ಕಥಾ ಶ್ರವಣ ಮಾಡಿದವರಿಗೆ ದಾರಿದ್ರ್ಯ ಕಳೆದು, ಆಯಸ್ಸು, ಆರೋಗ್ಯ, ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ನಂಬಿಕೆಯೂ ಇದೆ.

ಎಷ್ಟೇ ಈ ನಮ್ಮ ಆಧುನಿಕ, ಪಾಶ್ಚಿಮಾತ್ಯ ಜೀವನ ನಮ್ಮನ್ನು ಆವರಿಸಿದರೂ ನಾವು ನಮ್ಮ ಸಂಪ್ರದಾಯ, ಪದ್ದತಿಗಳನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇವೆ ಎನ್ನುವುದಕ್ಕೆ ಈ ವರಮಹಾಲಕ್ಷ್ಮಿ ಹಬ್ಬದ ಆಚರಣೆಯೇ ಸಾಕ್ಷಿ.

ಎಲ್ಲರೂ ಹಬ್ಬವನ್ನು ಸಡಗರ, ಸಂಭ್ರಮದೊಂದಿಗೆ ಆಚರಿಸಿ, ವಿಷ್ಣುವಿನ ಹೃದಯವಾಸಿ ಲಕ್ಷ್ಮಿದೇವಿಯನ್ನು ಪೂಜಿಸಿ, ಶ್ರದ್ಧೆ ಭಕ್ತಿಯೊಂದಿಗೆ ಅವಳನ್ನು ಆರಾಧಿಸಿ ಅವಳ ಕೃಪೆಗೆ ಪಾತ್ರರಾಗಿ.

  • Related Posts

    ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಕ್ಕೆ ಭೇಟಿ ನೀಡಿಮುಖ್ಯಮಂತ್ರಿ ಅವರಿಂದ ವಿಶೇಷ ಪೂಜೆ

    ಮಡಿಕೇರಿ ಜ.31-ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಭಾಗಮಂಡಲ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಮಹಾಗಣಪತಿ, ಭಗಂಡೇಶ್ವರ, ಮಹಾವಿಷ್ಣು, ಸುಬ್ರಹ್ಮಣ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತ್ರಿವೇಣಿ ಸಂಗಮಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕಾವೇರಿ ಉಗಮ ಸ್ಥಾನ…

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    Leave a Reply

    Your email address will not be published. Required fields are marked *

    error: Content is protected !!