ಬಿಜೆಪಿ ಪಕ್ಷ ಭ್ರಷ್ಟಾಚಾರಗಳ ತನಿಖೆ ಯಾವಾಗ ನರೇಂದ್ರ ಮೋದಿಗೆ ಸವಾಲ್ ಹಾಕಿದ್ದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬಿಜೆಪಿ ಸರ್ಕಾರದ 40% ಕಮಿಷನ್ ಹಗರಣವನ್ನು ತನಿಖೆಗೆ ವಹಿಸಿದ ಬೆನ್ನಲ್ಲೆ, ಕೇಂದ್ರ ಸರ್ಕಾರದ ಭ್ರಷ್ಟಾಚಾರಗಳನ್ನು ಬಯಲು ಮಾಡಿರುವ ಸಿಎಜಿ ವರದಿ ಕುರಿತು ತನಿಖೆ ನಡೆಸುವಂತೆ ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಟ್ವಿಟರ್ ಖಾತೆಯ ಮೂಲಕ ಭಾರತ್ ಮಾಲಾ, ದ್ವಾರಕಾ ಎಕ್ಸ್‌ಪ್ರೆಸ್‌ ವೇ ನಲ್ಲಿ ನಡೆದಿರುವ ಹಗರಣಗಳ ತನಿಖೆ ನಡೆಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸಧ್ಯ ಈ ಟ್ವಿಟ್ ಮತ್ತು ಟ್ವಿಟ್ ಸಂಬಂಧಿತ ಪೋಸ್ಟರ್ ಗಳು ಎಲ್ಲೆಡೆ ವೈರಲ್ ಆಗಿವೆ.

‘ಮಾನ್ಯ ನರೇಂದ್ರ ಮೋದಿ ಅವರೇ, ಹಿಂದಿನ ನಿಮ್ಮ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯದ ಗುತ್ತಿಗೆದಾರರು ಮಾಡಿರುವ 40% ಕಮಿಷನ್ ಆರೋಪದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯನ್ನು ರಚನೆ ಮಾಡುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ನಿಮ್ಮದೇ ಸರ್ಕಾರದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸಿಎಜಿ ನೀಡಿರುವ ವರದಿಯ ಬಗ್ಗೆ ನೀವು ಯಾವಾಗ ತನಿಖೆ ನಡೆಸಿ ‘’ನಾ ಖಾವೂಂಗಾ ನಾ ಖಾನೆ ದೂಂಗಾ’ ಎಂಬ ನಿಮ್ಮ ಘೋಷಣೆಗೆ ಅನುಗುಣವಾಗಿ ನುಡಿದಂತೆ ನಡೆಯುವಿರಿ?’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಅಕೌಂಟನ್ನು ಉಲ್ಲೆಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರೇ, ನಿಮ್ಮ ಮೂಗಿನಡಿಯಲ್ಲಿಯೇ ದ್ವಾರಕಾ ಎಕ್ಸ್‌ಪ್ರೆಸ್‌ ಹೈವೇ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ 250 ಕೋಟಿ ರೂ. ಕೊಳ್ಳೆ ಹೊಡೆಯಲಾಗಿದೆ, 5 ಟೋಲ್‌ ಪ್ಲಾಜಾಗಳಲ್ಲಿ 132 ಕೋಟಿ ಹಣವನ್ನು ಲೂಟಿ ಮಾಡಲಾಗಿದೆ, ನೀವು ಪದೇ ಪದೇ ಉಲ್ಲೇಖಿಸುವ ‘ಆಯುಷ್ಮಾನ್‌ ಭಾರತ್‌’ ಯೋಜನೆಯಲ್ಲಂತೂ ಮೃತಪಟ್ಟ ಸುಮಾರು 88,000 ಫಲಾನುಭವಿಗಳ ಹೆಸರಿನಲ್ಲಿ ಹೊಸದಾಗಿ ಬಿಲ್‌ಗಳನ್ನು ಕ್ಲೈಮ್‌ ಮಾಡಿ ಹಣ ನುಂಗಿ ಹಾಕಲಾಗಿದೆ ಎಂದು ಸಿಎಜಿ ವರದಿ ಮಾಡಿದೆ. ಇದರ ಬಗ್ಗೆ ತನಿಖೆ ನಡೆಸುವ ಧೈರ್ಯ ತೋರಿಸುವಿರಾ?’ ಎಂದು ನರೇಂದ್ರ ಮೋದಿ ಅವಧಿಯಲ್ಲೇ ಆದ ಹಗರಣಗಳ ಬಗ್ಗೆ ಪ್ರಸ್ತಾಪಿಸಿ ಕುಟುಕಿದ್ದಾರೆ.

ಭಾರತ್ ಮಾಲಾ ಹಗರಣದ ಬಗ್ಗೆ ಪ್ರಸ್ತಾಪಿಸಿ ‘ಪ್ರಧಾನಿ ನರೇಂದ್ರ ಮೋದಿ ಅವರೇ, ನೀವು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅಧ್ಯಕ್ಷರೂ ಆಗಿದ್ದೀರಿ. ಭಾರತ್ ಮಾಲಾ ಯೋಜನೆಯಲ್ಲಿ ಪ್ರತಿ ಕಿ.ಮೀ.ಗೆ ರೂ.15.37 ಕೋಟಿ ಗಳಿಂದ ರೂ.32 ಕೋಟಿ ವರೆಗೆ ಹೆಚ್ಚುವರಿ ಖರ್ಚು ತೋರಿಸಲಾಗಿದೆ ಎಂದು ಸಿಎಜಿ ವರದಿ ಮಾಡಿದೆ.
ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?’ ಎಂದು ಪ್ರಶ್ನಿಸಿದ್ದಾರೆ.

‘ಸಂಪರ್ಕ ವ್ಯವಸ್ಥೆ ಸುಧಾರಣೆಯ ಅತಿ ಪ್ರಚಾರದ ಭಾರತ ಮಾಲಾ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿಯೇ ಅಕ್ರಮ ನಡೆದಿದೆ ಮತ್ತು ಆ ಯೋಜನೆ ಬಗೆಗೆ ವಿಸ್ತೃತವಾದ ವರದಿಯೇ ಸಲ್ಲಿಕೆಯಾಗಿಲ್ಲ. ಹೀಗಿದ್ದರೂ 3,500 ಕೋಟಿ ಹಣವನ್ನು ವರ್ಗಾಯಿಸಲಾಗಿದೆ ಎಂದು ಸಿಎಜಿ ಲೋಪವನ್ನು ಎತ್ತಿ ತೋರಿಸಿದೆ. ಪ್ರಧಾನಿ ಮೋದಿ ಅವರೇ, ಈ ಬಗ್ಗೆ ನಿಮ್ಮ ಮೌನವನ್ನು ಅಕ್ರಮದಲ್ಲಿ ಷಾಮೀಲಾಗಿದ್ದೀರಿ ಎಂದು ವ್ಯಾಖ್ಯಾನಿಸಬಹುದೇ?’ ಎಂದು ತೀವ್ರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರೇ, ದಿಲ್ಲಿ-ಗುರುಗ್ರಾಮ ಗಡಿಯಲ್ಲಿರುವ ದ್ವಾರಕಾ ಎಕ್ಸ್ ಪ್ರೆಸ್ ವೇ ಯೋಜನೆಯಲ್ಲಿ ಅಕ್ರಮ ನಡೆದಿರುವ ವರದಿಗಳಿವೆ. ಪ್ರತಿ ಕಿ.ಮೀ.ಗೆ 18.2 ಕೋಟಿ ರೂ.ಗಳಿಂದ 251 ಕೋಟಿ ರೂ.ಗಳ ವರಗೆ ನಿರ್ಮಾಣ ವೆಚ್ಚವನ್ನು ಅವೈಜ್ಞಾನಿಕ ರೀತಿಯಲ್ಲಿ ಏರಿಸಲಾಗಿರುವ ಆರೋಪಗಳಿವೆ. ಈ ಬಗ್ಗೆ ಸಮಗ್ರ ರೂಪದ ತನಿಖೆಯ ಅಗತ್ಯ ಇದೆ ಎಂದು ನಿಮಗೆ ಅನಿಸುವುದಿಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.

ನಿರಂತರವಾಗಿ I.N.D.I.A ಒಕ್ಕೂಟದ ಬಗ್ಗೆ ಮಾತನಾಡುತ್ತಿರುವ ಮೋದಿಯವರನ್ನು ಆ ವಿಚಾರವಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದ್ದಾರೆ. ‘ಮಾನ್ಯ ನರೇಂದ್ರ ಮೋದಿ ಅವರೇ, ನೀವು I.N.D.I.A ಒಕ್ಕೂಟವನ್ನು ಭ್ರಷ್ಟರ ಒಕ್ಕೂಟವೆಂದು ಸುಳ್ಳು ಆರೋಪ ಹೊರಿಸಿ ಸಂಭ್ರಮಿಸುತ್ತೀರಿ, ನಿಮ್ಮದೇ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ತೊಡಗಿರುವ ಬಗ್ಗೆ ಸಿಎಜಿ ವರದಿಯು ಬಟಾಬಯಲು ಮಾಡಿದ್ದರೂ ಕಣ್ಣು, ಬಾಯಿಮುಚ್ಚಿ ಕೂತಿದ್ದೀರಿ. ಇದು ಆತ್ಮವಂಚಕ ನಡವಳಿಕೆ ಅಲ್ಲವೇ?’ ಎಂದಿದ್ದಾರೆ.

‘ಮಾನ್ಯ ನರೇಂದ್ರ ಮೋದಿ ಅವರೇ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ನಿಮ್ಮದೇ ಪರಿವಾರ ಆರೋಪಗಳನ್ನು ಮಾಡತೊಡಗಿದೆ. ‘ಪಿಎಂ ಕೇರ್ಸ್‌ ಫಂಡ್’‌ ಅನ್ನು ಸರ್ಕಾರದ್ದೆಂದು ಭಾವಿಸಿ ಮುಗ್ಧ ಜನತೆ ಅಪಾರ ಪ್ರಮಾಣದಲ್ಲಿ ಹಣವನ್ನು ದಾನವಾಗಿ ನೀಡುತ್ತಿದ್ದಾರೆ. ಆದರೆ, ನಿಮ್ಮ ಸರ್ಕಾರ ಅದನ್ನು ಸಾರ್ವಜನಿಕ ದತ್ತಿ ಟ್ರಸ್ಟ್‌ ಎಂದು ಹೆಸರಿಸಿ ಅದನ್ನು ಮಾಹಿತಿ ಹಕ್ಕಿನಿಂದ ಹೊರಗಿರಿಸಿರಿದೆ.
ಈ ದುಡ್ಡಿನಿಂದ ಯಾರಿಗೆ ಲಾಭವಾಗುತ್ತಿದೆ ಹೇಳಬಲ್ಲಿರಾ?’ ಎನ್ನುವ ರೀತಿಯಲ್ಲಿ ಸರಣಿ ಟ್ವಿಟ್ ಮಾಡುವ ಮೂಲಕ ಕೇಂದ್ರ ಸರ್ಕಾರ, ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಸುತ್ತಲೇ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

  • Related Posts

    ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕನಸುಬಿಜೆಪಿ ಟಿಕೇಟ್ ಪ್ರಬಲ ಆಕಾಂಕ್ಷಿ: ಕೆ.ಬಿ.ಕೊಟ್ರೇಶ್,,,

    ದಾವಣಗೆರೆ.ಸೆ.25: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಮೂಲಕ ಜಿಲ್ಲೆಯನ್ನು ಮಾದರಿಯಾಗಿ ಮಾಡುವ ಕನಸು ಕಟ್ಟಿರುವುದಾಗಿ ಬಿಜೆಪಿ ಟಿಕೇಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ಹೇಳಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ತಾವೂ ಕೂಡ ಬಿಜೆಪಿ ಟಿಕೇಟ್‌ಗೆ…

    *ಮೋದಿ ಸರ್ಕಾರದಲ್ಲಿ ಆದಿವಾಸಿಗಳು ಮತ್ತು ದಲಿತರಿಗೆ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕಿದೆ: ಅಮಿತ್ ಶಾ*

    ಮಧ್ಯಪ್ರದೇಶದ ಮಂಡ್ಲಾದಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ‘ಕಾಂಗ್ರೆಸ್ ಸದಾ ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣದಲ್ಲಿ ಮುಳುಗಿದ್ದು, ಸಾಮಾಜಿಕ ನ್ಯಾಯವನ್ನು ನಾಶಪಡಿಸಿದೆ’ ಎಂದರು. ಅಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್…

    Leave a Reply

    Your email address will not be published. Required fields are marked *

    error: Content is protected !!