

ಅವಿನಾಶ್‌ಗೆ ರಾಷ್ಟ್ರಮಟ್ಟದಲ್ಲಿ 31ನೇ ರ್ಯಾಂಕ್

ದಾವಣಗೆರೆ ನಗರದ ಹೋಟೆಲ್ ಉದ್ಯಮಿ ವಿಠ್ಠಲ ರಾವ್ ಅವರ ಪುತ್ರ ಅವಿನಾಶ ವಿ. ರಾವ್ ಮೊದಲ ಪ್ರಯತ್ನದಲ್ಲೇ ಕೇಂದ್ರ ನಾಗರಿಕ ಸೇವಾ ಆಯೋಗದ ಪರೀಕ್ಷೆ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತಿದ್ದಾರೆ. ರಾಷ್ಟ್ರಮಟ್ಟದಲ್ಲಿ ೩೧ನೇ ರ್ಯಾಂಕ್ ಸಾಧನೆ ಮಾಡಿ, ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ, ದಾವಣಗೆರೆಯ ಲಾಯರ್ಸ್ ರಸ್ತೆಯಲ್ಲಿರುವ ಅವಿನಾಶ್ ಅವರ ಮನೆಯಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ.
ಅವಿನಾಶ್ ಯುಪಿಎಸ್‌ಇಯಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಿರುವ ಹಿನ್ನೆಲೆಯಲ್ಲಿ ನಗರದ ಆನಂದ್ ರೆಸಿಡೆನ್ಸಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರ ಅಜ್ಜ, ತಂದೆ, ತಾಯಿ, ಸಹೋದರಿ ಹಾಗೂ ದೊಡ್ಡಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಅವಿನಾಶ್ ಸಾಧನೆಯಿಂದ ಕುಟುಂಬದ ಗೌರವ ಹೆಚ್ಚಾಗಿದೆ. ಈ ಮೂಲಕ ನಮ್ಮ ಮಗ ದಾವಣಗೆರೆ ಹಾಗೂ ಇಡೀ ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ ಎಂದು ಕೊಂಡಾಡಿದ್ದಾರೆ.

ಅವಿನಾಶ್‌ರ ತಾತ ಆನಂದ ರಾವ್, ಮೂಲತಃ ಉಡುಪಿ ಜಿಲ್ಲೆಯವರು ಸುನಾರು ೭ ದಶಕಗಳ ಹಿಂದೆ ದಾವಣಗೆರೆಗೆ ಬಂದ ಅವರು ಇಲ್ಲಿ ಜನತಾ ಹೋಟೆಲ್ ಆರಂಭಿಸಿದ್ದರು. ಪ್ರಸ್ತುತ ಅವರ ಮಾಲೀಕತ್ವದಲ್ಲಿ ನಗರದಲ್ಲೇ ಮೂರು ಹೋಟೆಲ್‌ಗಳಿವೆ. ದಾವಣಗೆರೆಯಲ್ಲೇ ಹುಟ್ಟಿ ಬೆಳೆದ ಅವಿನಾಶ ರಾವ್, ಎಂಸಿಸಿ ಬಿ ಬ್ಲಾಕ್‌ನಲ್ಲಿರುವ ಬಾಪೂಜಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ತೋಳಹುಣಸೆಯ ಪಿಎಸ್‌ಎಸ್‌ಆರ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದಾರೆ. ನಗರದ ಧವನ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿದ್ಯಾಲಯದಲ್ಲಿ ೫ ವರ್ಷಗಳ ಕಾನೂನು ಪದವಿ ಪಡೆದಿದ್ದಾರೆ.

ಮೊದಲ ಪ್ರಯತ್ನದಲ್ಲೇ ಯಶಸ್ಸು
ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅಗ್ರ ಶ್ರೇಯಾಂಕದಲ್ಲಿ ಉತ್ತೀಣರಾಗಿರುವ ಅವಿನಾಶ್, ಕಾನೂನು ಪದವಿಯಲ್ಲಿ ಬಂಗಾರದ ಪದಕ ಗಳಿಸಿದ್ದಾರೆ. ಆರಂಭದಿಂದಲೂ ಹೋಟೆಲ್ ವ್ಯವಹಾರದ ಬಗ್ಗೆ ತಲೆ ಕೆಡಿಸಿಕೊಳ್ಳದ ಅವಿನಾಶ್, ಓದಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದರು. ಪ್ರಸ್ತುತ ಕಠಿಣ ಪರಿಶ್ರಮದಿಂದ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಇ ಪರೀಕ್ಷೆ ಕ್ಲಿಯರ್ ಮಾಡಿರುವ ಅವರು, ಭಾರತೀಯ ವಿದೇಶ ಸೇವೆ (ಐಎಫ್‌ಎಸ್) ಆಯ್ಕೆ ಮಾಡಿಕೊಂಡಿದ್ದಾರೆ.

ಪುತ್ರನ ಸಾಧನೆ ಕುರಿತು ಪ್ರತಿಕ್ರಿಯಿಸಿದ ವಿಠ್ಠಲ ರಾವ್, ‘ವಿದೇಶಾಂಗ ವಿಭಾಗ ಆಯ್ಕೆ ಮಾಡಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶ ಸೇವೆ ಸಲ್ಲಿಸಬೇಕು ಎಂಬುದು ಅವಿನಾಶನ ಆಸೆ. ಈ ಯಶಸ್ಸಿನ ಹಿಂದೆ ಹಲವು ವರ್ಷಗಳ ಕಠಿಣ ಪರಿಶ್ರಮವಿದೆ. ಜತೆಗೆ ಆತನ ಕನಸುಗಳಿಗೆ ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಜ್ಜ ಆನಂದ ರಾವ್, ತಾಯಿ ಸ್ಮಿತಾ ರಾವ್, ದೊಡ್ಡಪ್ಪ ನಾಗರಾಜ ರಾವ್, ಸಹೋದರಿ ಡಾ. ಅಪರ್ಣಾ ಇದ್ದರು.

ಅವಳಿ ಮಕ್ಕಳು
ವಿಠ್ಠಲ ರಾವ್ ಅವರಿಗೆ ಅವಿನಾಶ್ ಹಾಗೂ ಡಾ. ಅರ್ಪಿತಾ ಅವಳಿ ಮಕ್ಕಳು. ಅವಿನಾಶ್ ಯುಪಿಎಸ್‌ಇಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಿದ್ದುಘಿ, ಪುತ್ರಿ ಅರ್ಪಿತಾ ಎಂಬಿಬಿಎಸ್ ಮುಗಿಸಿ ಇದೀಗ ಎಂಡಿ ವಿದ್ಯಾಭ್ಯಾಸಕ್ಕೆ ತಯಾರಿ ನಡೆಸುತ್ತಿದ್ದಾರೆ.