

ದಾವಣಗೆರೆ: ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಯಿಂದ ಖಾಲಿ ಇರುವ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಭಡ್ತಿ ನೀಡಲು ಕ್ರಮವಹಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಮುಖೇನ ಮುಖ್ಯಮಂತ್ರಿಗಳಿಗೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ)ಗಳು ಮನವಿ ಸಲ್ಲಿಸಿದರು.
೨೦೦೬-೨೦೦೭ ರಿಂದ ೨೦೧೧-೨೦೧೨ರ ವರೆಗೆ ಮನರೇಗಾ ಯೋಜನೆಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ತನಿಖೆ ಮಾಡಲು ಲೋಕಾಯುಕ್ತಕ್ಕೆ ವಹಿಸಿರುವ ಪ್ರಕರಣವನ್ನು ವಾಪಸ್ ಪಡೆಯಬೇಕು, ೮ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಗ್ರೂಪ್ ಬಿಗೆ ಮೇಲ್ದರ್ಜೆಗೆರಿಸಬೇಕು. ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ನೌಕರರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡುವ ನಿಯಮವನ್ನು ಕೂಡಲೇ ಜಾರಿಗೊಳಿಸಬೇಕೆಂಬುದು ಸೇರಿ ೧೫ ಬೇಡಿಕೆಗಳ ಈಡೇರಿಕೆಗೆ ಪಿಡಿಓಗಳು ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ಡಿ. ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಶೇ.೭೦ರಷ್ಟು ಗ್ರಾಮೀಣ ಜನತೆಯನ್ನು ಪ್ರತಿನಿಧಿಸುವುದರೊಂದಿಗೆ, ಗ್ರಾಮ ಮಟ್ಟದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಚರಂಡಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ರಸ್ತೆ ಸಂಪರ್ಕ, ವಸತಿ, ನರೇಗಾ ಯೋಜನೆಯಡಿ ಉದ್ಯೋಗ ಇತ್ಯಾದಿ ಸೌಲಭ್ಯಗಳನ್ನು ನೀಡುವುರೊಂದಿಗೆ ೨೯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುವ ಹೊಣೆ ಪಿಡಿಓಗಳಿಗೆ ಇರುತ್ತದೆ ಎಂದರು.
ಇಂತಹ ಒತ್ತಡದ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ ಮತ್ತು ನೌಕರರು ಕಡಿಮೆ ಸಿಬ್ಬಂದಿಗಳೊಂದಿಗೆ ಅಧಿಕ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ನಮ್ಮ ಬೇಡಿಕೆ ಈಡೇರಿಸುವಂತೆ ಅನೇಕ ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದರೂ ಸಹ ನಮ್ಮ ಕೆಲ ಬೇಡಿಕೆಗಳನ್ನು ಸರಕಾರ ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದ್ದರಿಂದ, ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತೊಮ್ಮೆ ಮನವಿ ಮಾಡಲಾಗುತ್ತಿದ್ದು, ೧೫ ದಿನಗಳ ಒಳಗಾಗಿ ನಮ್ಮ ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ಮುಂದಿನ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಐ.ಬಿ. ಸುರೇಖಾ, ಪರಮೇಶ್ ಕೊಲ್ಲೂರು, ಶರಣಪ್ಪ ಮಲವನಶೆಟ್ಟಿ, ತಿಪ್ಪೇಸ್ವಾಮಿ, ಅಭಿಜಿತ್, ನಾಗರಾಜ್, ಉಮೇಶ್, ರೇಣುಕಾ ಪ್ರಸಾದ್, ಎಂ.ವಿ. ರವಿ, ಶಿರಿನ್ತಾಜ್, ಸವಿತ ಬಾಯಿ, ಮರುಳಸಿದ್ದಪ್ಪ, ಲೋಹಿತ್, ಯೋಗೇಶ್ ಇತರರು ಇದ್ದರು.