

ಜಗಳೂರು : ತಾಲ್ಲೂಕಿನ ಸಿದ್ದಯ್ಯನಕೋಟೆ ಗ್ರಾಮದಲ್ಲಿ ಗುರುವಾರ ವಿಷಯುಕ್ತ ಸಸಿಗಳನ್ನು ಸೇವಿಸಿ 13 ಕುರಿಗಳು ಸಾವನ್ನಪ್ಪಿವೆ . ಸಿದ್ದಯ್ಯನಕೋಟೆ ಗ್ರಾಮದ ಹನುಮಂತಪ್ಪ , ಕುಮಾರ , ಸಿದ್ದಪ್ಪ ಹಾಗೂ ಅಂಜಿನಪ್ಪ ಎಂಬುವವರಿಗೆ ಸೇರಿದ ನೂರಾರು ಕುರಿಗಳು ಗ್ರಾಮದ ಹೊರವಲಯಲ್ಲಿರುವ ಈರುಳ್ಳಿ ಜಮೀನಿನಲ್ಲಿರುವ ವಿಷಯುಕ್ತ ಕಳೆ ಸಸ್ಯಗಳನ್ನು ಸೇವಿಸಿದ್ದವು . ಈ ಪೈಕಿ 13 ಕುರಿಗಳು ಸಾವನಪ್ಪಿವೆ . ಪ್ರಾದೇಶಿಕ ಪಶುರೋಗ ಸಂಸ್ಥೆ ವೈದ್ಯಾಧಿಕಾರಿ ಡಾ.ದೇವರಾಜ್ , ಪಶು ಸಂಗೋಪನಾ ಇಲಾಖೆ ವೈದ್ಯ ಡಾ.ಮಹಾದೇವಪ್ಪ ಹಾಗೂ ಕುರಿ ಮತ್ತು ಉಣ್ಣೆನಿಗಮದ ಸಹಾಯಕ ನಿರ್ದೇಶಕ ಡಾ.ಶಿವಕುಮಾರ್ ಅವರು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡಿದ್ದ ಕುರಿಗಳಿಗೆ ತುರ್ತು ಚಿಕಿತ್ಸೆ ನೀಡಿದರು . ಅಸ್ವಸ್ಥ ಕುರಿಗಳು ಚೇತರಿಸಿಕೊಂಡಿದ್ದು , ಹೆಚ್ಚಿನ ಅನಾಹುತ ತಪ್ಪಿದೆ . ಪರಿಹಾರಕ್ಕೆ ಕ್ರಮ : ‘ ಸಾವನ್ನಪ್ಪಿರುವ ಕುರಿಗಳ ಮಾಲೀಕರಿಗೆ ಸರ್ಕಾರದ ಸಂಜೀವಿನಿ ಯೋಜನೆಯಡಿ ಪರಿಹಾರ ಕಲ್ಪಿಸುವ ಬಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ‘ ಎಂದು ಸಹಾಯಕ ನಿರ್ದೇಶಕ ಡಾ.ಶಿವಕುಮಾರ್ ಕುರಿ ಮಾಲೀಕರಿಗೆ ಭರವಸೆ ನೀಡಿದರು .