

ಜಗಳೂರು : ದೇಶ ಆರ್ಥಿಕವಾಗಿ ದೀವಾಳಿಯಾಗುತ್ತಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಆರ್ಥಿಕ ನೀತಿಗಳು ಕಾರ್ಪೊರೇಟ್ ಪರವಾಗಿದ್ದು ರಾಷ್ಟ್ರದ ವಿರೋಧಿ ನೀತಿಗೆ ವಿರುದ್ಧವಾಗಿವೆ ಎಂದು ತಾಲೂಕು ಜೆಸಿಟಿಯು ಅಧ್ಯಕ್ಷ ಮೊಹಮದ್ ಪಾಷ ಕಿಡಿಕಾರಿದರು.
ಸೋಮವಾರ ಪಟ್ಟಣದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯಗಳ ಅಖಿಲ ಭಾರತ ಒಕ್ಕೂಟಗಳು ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಜೊತೆ ಪ್ರತಿಭಟನೆ ನಡೆಸಿದ ಅವರು ‘ಭಾರತ ಉಳಿಸಿ ಜನರನ್ನು ರಕ್ಷಿಸಿ’ ಎಂದು ಜಾಥ ನಡೆಸಿ ತಹಶೀಲ್ದಾರ್ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಿದರು.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಮಾತನಾಡಿದ ಅವರು, ಕಾರ್ಮಿಕ ಸಂಹಿತೆಗಳನ್ನು ರದ್ದುಗಳಿಸಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ಬೆಂಬಲ ಬೆಲೆ ಖಾತ್ರಿಮಾಡಬೇಕು. ವಿದ್ಯುತ್ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ತಿಂಗಳಿಗೆ ೭,೫೦೦ ಆಹಾರ ಮತ್ತು ಆದಾಯ ಬೆಂಬಲ ಒದಗಿಸಬೇಕು, ನರೇಗಾಗೆ ಹೆಚ್ಚಿನ ನಿಧಿ ನೀಡಿ ಮತ್ತು ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಗಳಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯೂ ಸೇರಿದಂತೆ ಅನೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರ ತಕ್ಷಣವೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಈವೇಳೆ ಜೆಸಿಟಿಸಿ ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ಗ್ರಾಪಂ ಅಸಂಘಟಿತ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ್, ನೆರಳು ಬೀಡಿ ಕಾರ್ಮಿಕರ ಯೂನಿಯನ್, ಕರ್ನಾಟಕ ಶ್ರಮಿಕ ಶಕ್ತಿ, ಬ್ಯಾಂಕ್ ನೌಕರರ ಸಂಘ ಮತ್ತು ಎಲ್‌ಐಸಿ ಎಂಪ್ಲಾಯಿಸ್ ಯೂನಿಯ್‌ನ ಕಾರ್ಮಿಕರು ಮತ್ತು ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಪಟ್ಟಣದ ತಾಲೂಕು ಕಚೇರಿ ಎದುರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಿವಿಧ ಬೇಡಿಎಕಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.