
ಕೊಟ್ಟೂರು : ಇಲ್ಲಿನ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ಮಹಾರಥೋತ್ಸವವು ಮೂಲಾ ನಕ್ಷತ್ರದಲ್ಲಿ ಬಹು ವಿಜೃಂಭಣೆಯಿಂದ ಶುಕ್ರವಾರ ಜರುಗಿದೆ. ಕೋವಿಡ್ ವೈರಸ್ ಕಾರಣ ನಿಮಿತ್ತ ಜಿಲ್ಲಾಡಳಿತ ಹೊರ ಜಿಲ್ಲೆಯ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಪ್ರತಿವರ್ಷದ ಪದ್ಧತಿಯಂತೆ ರಥೋತ್ಸವ ಜರುಗಿದ ಬಳಿಕ ತೇರು ಬಜಾರ್‌ನ ತನ್ನ ಜಾಗದಲ್ಲಿ ನಿಲುಗಡೆಗೊಂಡಿತು.

ಶ್ರೀ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ಪ್ರಾರಂಭಗೊಳ್ಳುತ್ತಿದ್ದಂತೆ ವಿಸ್ಮಯ ಎಂಬಂತೆ ಜಮಾವಣೆಗೊಂಡಿದ್ದ ಜನಸ್ತೋಮ ಒಗ್ಗಟ್ಟಾಗಿ ರಥೋತ್ಸವವನ್ನು ಎಳೆದೊಯ್ಯಲು ನಾ ಮುಂದೆ ತಾ ಮುಂದೆ ಎಂಬಂತೆ ಮುಗಿಬಿದ್ದರು. ತದನಂತರ 70 ಅಡಿ ಎತ್ತರದ ರಥೋತ್ಸವ ರಾಜ ಗಾಂಭೀರ್ಯದೊಂದಿಗೆ ಬಯಲುಗುಂಟ ಸಾಗಿತು. ಇದಕ್ಕೂ ಮುನ್ನ ಶ್ರೀ ಸ್ವಾಮಿಯನ್ನು ಮಧ್ಯಾಹ್ನದ ಪೂಜಾ ಕೈಂಕರ್ಯದ ನಂತರ ಮೂಲ ಹಿರೇಮಠದಿಂದ ಪ್ರಧಾನ ಧರ್ಮಕರ್ತ ಸಿ.ಎಚ್.ಎಂ. ಗಂಗಾಧರಯ್ಯ ಮತ್ತು ಪೂಜಾ ಬಳಗದವರು ಸಕಲ ಬಿರುದಾವಳಿಗಳೊಂದಿಗೆ ಹೊರ ತಂದು ಬೆಳ್ಳಿ ಪಲ್ಲಕ್ಕಿಯಲ್ಲಿ ಆಸೀನಪಡಿಸಿ ಸಂಭ್ರಮದ ಮೆರವಣಿಗೆ ಕೈಗೊಂಡರು.