

ಧಾರವಾಡ ಸೆ.15: ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಹಕ್ಕು ಹಾಗೂ ಕರ್ತವ್ಯಗಳು, ಜವಾಬ್ದಾರಿಯನ್ನು ಸಂವಿಧಾನ ನಮಗೆ ನೀಡಿದೆ. ಭ್ರಾತೃತ್ವ ಸೌಹಾರ್ದತೆಯೊಂದಿಗೆ ಸಮಾನತೆಯನ್ನು ನೀಡಿದೆ ಎಂದು ಕಲಘಟಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಮಾಲತಿ ಹಿರೇಮಠ ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಕಿಟೆಲ್ ಕಲಾ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್.ಎಸ್.ಎಸ್ ಘಟಕದಿಂದ ಆಯೋಜಿಸಿದ್ದ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನದ ಪೀಠಿಕೆ ಸಾಮೂಹಿಕ ಓದು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಂವಿಧಾನದ ಮಹತ್ವ ಅರಿಯಲು ಇದು ಸೂಕ್ತ ಕಾಲ. ಸಂವಿಧಾನದ ತಿಳುವಳಿಕೆಯೊಂದಿಗೆ ಮುನ್ನಡೆದು, ಭಾರತದ ಸತ್ಪ್ರಜೆಗಳಾಗೋಣವೆಂದರು. ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯ ಕರಡು ಸಮಿತಿ ವಿಶ್ವದ ನಾನಾ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ಉತ್ತಮವಾದ ಅಂಶಗಳನ್ನು ಬಳಸಿಕೊಂಡು ಭಾರತದ ಸಂವಿಧಾನವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ್ದಾರೆ ಎಂದು ಹೇಳಿದರು.

ಯುವಕರು ವಿಶೇಷವಾಗಿ ವಿದ್ಯಾರ್ಥಿ ಸಮುದಾಯ ಭಾರತದ ಸಂವಿಧಾನವನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳಲು ಆಧ್ಯತೆ ನೀಡಬೇಕು. ಸಮಗ್ರ ಅಭಿವೃದ್ಧಿ ವ್ಯಕ್ತಿಯ ಹಿತದೊಂದಿಗೆ ಸಮುದಾಯದ ಹಿತವನ್ನು ಬಯಸುವ ನಮ್ಮ ಸಂವಿಧಾನ ಇತರರಿಗೆ ಮಾದರಿಯಾಗಿದೆ ಎಂದು ಪ್ರೊ.ಮಾಲತಿ ಹಿರೇಮಠ ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯೆ ಡಾ. ರೇಖಾ ಎಮ್. ಜೋಗುಳ್ ಅವರು ಮಾತನಾಡಿ, ಸಂವಿಧಾನ ಪೀಠಿಕೆಯ ಸಾಮೂಹಿಕ ಓದಿಗೆ ನಾವೆಲ್ಲರೂ ಸಾಕ್ಷಿಯಾಗಿರುವುದು ಹೆಮ್ಮೆಯ ಸಂಗತಿ. ಇದೊಂದು ಮರೆಯದ ಐತಿಹಾಸಿಕ ದಿನ. ಸಂವಿಧಾನ ಆಧಾರಿತ ಚಟುವಟಿಕೆಗಳು ಮಕ್ಕಳಲ್ಲಿ ದೇಶಾಭಿಮಾನ ಬೆಳೆಸುತ್ತವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸುಪ್ರಿಯಾ ಮತ್ತು ಶ್ರೀಶೈಲ ಸಂವಿಧಾನ ಕುರಿತು ಮಾತನಾಡಿದರು.
ಪೆÇ್ರ. ಡ್ಯಾನಿಯೇಲ್ ಅವರು ಸ್ವಾಗತಿಸಿ, ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧಿ ಬೋಧಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿ ಅವಿನಾಶ್ ಪ್ರಾರ್ಥಿಸಿದರು. ಸುಬ್ರಹ್ಮಣ್ಯ ಎಮ್. ವಂದಿಸಿದರು. ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮಹೇಶ್ ಮ್ ಶರ್ಮಾ
ಉತ್ತರ ಕರ್ನಾಟಕದ ವಿಶೇಷ ವರದಿಗಾರು