

ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿರುವ ‘ಉಪ ವಿಭಾಗ ಅಧಿಕಾರಿಗಳ ಕಚೇರಿ ಮುತ್ತಿಗೆ ಮತ್ತು ಕಾವೇರಿ ನಿರ್ವಹಣಾ ಪ್ರಾಧಿಕಾರ ಹೋರಾಟದ ಹಿನ್ನೆಲೆಯಲ್ಲಿ ಮನವಿ ಪತ್ರ.
ಮಹಾನಗರ ಪಾಲಿಕೆ ಆವರಣದಿಂದ ಹೊರಟ ಮೆರವಣಿಗೆ ಮೂಲಕ ಉಪ ವಿಭಾಗ ಅಧಿಕಾರಿ ಕಚೇರಿಗೆ ಮತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು
ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದಷ್ಟು ಬರಗಾಲದ ಸ್ಥಿತಿ ನಿರ್ಮಾಣವಾಗಿದೆ. ವಾಡಿಕೆಯಂತೆ ಮಳೆ ಆಗಿಲ್ಲ. ಈಗಾಗಲೇ 236 ತಾಲ್ಲೂಕುಗಳ ಪೈಕಿ 192 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ. ವಿಶೇಷವಾಗಿ ಕಾವೇರಿ ಕಣಿವೆ ಭಾಗದಲ್ಲಿ ತೀವ್ರ ಸ್ವರೂಪದ ಬರದ ಸ್ಥಿತಿ ನಿರ್ಮಾಣವಾಗಿದೆ. ಕೃಷ್ಣರಾಜಸಾಗರ ಜಲಾಶಯದಲ್ಲಿ ಉಳಿದಿರುವುದು ಕೇವಲ 20 ಟಿಎಂಸಿ ನೀರು. ಅದರಲ್ಲಿ ಬಳಕೆಗೆ ಸಿಗುವುದು ಕೇವಲ 15 ಟಿಎಂಸಿ ನೀರು ಮಾತ್ರ. ಇಂಥ ಸಂದರ್ಭದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಸುಮಾರು 7 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಹರಿಸಲು ಆದೇಶಿಸಿರುವುದು ಆಶ್ಚರ್ಯಕರವಾಗಿದೆ, ಆಘಾತಕಾರಿಯಾಗಿದೆ.

ಬೆಂಗಳೂರಿಗೆ ಪ್ರತಿ ತಿಂಗಳು ಕುಡಿಯುವ ನೀರಿಗೇ ಒಂದೂವರೆ ಟಿಎಂಸಿ ನೀರು ಬೇಕು. ಕಾವೇರಿ ಕಣಿವೆಯ ರೈತರ ಹೊಲಗದ್ದೆಗಳಿಗೆ ನೀರಿಲ್ಲ. ಕೈಗಾರಿಕೆಗಳಿಗೆ ಕೊಡಬೇಕಾದ ನೀರಿಲ್ಲ. ಹೀಗಿರುವಾಗ ಏಳು ಟಿಎಂಸಿ ನೀರು ಎಲ್ಲಿಂದ ತರಲು ಸಾಧ್ಯ? ಮಂಡ್ಯ ಭಾಗದ ರೈತರು ನೀರಿಗೆ ಏನು ಮಾಡಬೇಕು? ಬೆಂಗಳೂರಿನ ಒಂದೂವರೆ ಕೋಟಿ ಜನರು ಕುಡಿಯುವ ನೀರು ಇಲ್ಲದೆ ಸಾಯಬೇಕೆ?
ಕಾವೇರಿ ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ರಾಜ್ಯ ಸರ್ಕಾರ ಯಾವ ಕಾರಣಕ್ಕೂ ಪಾಲಿಸಬಾರದು. ನಾಡಿನ ಜನರ ಜೀವಗಳಿಗಿಂತ ಯಾವುದೋ ಪ್ರಾಧಿಕಾರದ ಆದೇಶ ದೊಡ್ಡದಾಗಲು ಹೇಗೆ ಸಾಧ್ಯ? ಈ ಪ್ರಾಧಿಕಾರದ ಆದೇಶ ಪಾಲಿಸಲು ಹೋಗಿ ಅವರು ಕೇಳಿದಷ್ಟು ನೀರನ್ನು ಇದುವರೆಗೆ ಬಿಟ್ಟಿದ್ದೇ ರಾಜ್ಯ ಸರ್ಕಾರದ ದೊಡ್ಡ ತಪ್ಪು. ಈಗಲೂ ಸರ್ಕಾರ ಸ್ಪಷ್ಟ ಧೋರಣೆಯನ್ನು ಪ್ರಕಟಿಸಿದಂತೆ ಕಾಣುತ್ತಿಲ್ಲ. ಈಗಲಾದರೂ ರಾಜ್ಯ ಸರ್ಕಾರ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತಾಡುವುದನ್ನು ಬಿಟ್ಟು ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂಬ ದೃಢ ಘೋಷಣೆಯನ್ನು ಮಾಡಬೇಕು.

ರಾಜ್ಯ ಸರ್ಕಾರ ಮತ್ತೆ ನೀರು ಬಿಟ್ಟರೆ ಕುಡಿಯುವ ನೀರೂ ಇಲ್ಲದೆ ಹಾಹಾಕಾರ ಉಂಟಾಗಲಿದೆ. ಅದರಿಂದ ಆಗುವ ಅನಾಹುತಗಳನ್ನು ಊಹಿಸಲೂ ಸಾಧ್ಯವಿಲ್ಲ. ರಾಜ್ಯದ ಎಲ್ಲ ಸಂಸದರೂ ದೆಹಲಿಯಲ್ಲಿ ಧರಣಿ ನಡೆಸಬೇಕು, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು, ರಾಜೀನಾಮೆ ನೀಡಲೂ ಸಿದ್ಧವಾಗಿರಬೇಕು.
ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಪ್ರಾಧಿಕಾರದ ಆದೇಶವನ್ನು ಪಾಲಿಸಬಾರದು, ತಮಿಳುನಾಡಿಗೆ ಮತ್ತೆ ನೀರು ಬಿಡಕೂಡದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ. ಒಂದೊಮ್ಮೆ ಸರ್ಕಾರ ಅಂಥ ದುಸ್ಸಾಹಸಕ್ಕೆ ಕೈಹಾಕಿದರೆ ರಾಜ್ಯದ ಜನರು ದಂಗೆ ಏಳುವ ಸ್ಥಿತಿ ನಿರ್ಮಾಣವಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ತಮ್ಮ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ.

ಜಿಲ್ಲಾಧ್ಯಕ್ಷರು ಮಹಿಳಾ ಘಟಕ ಕರವೇ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪದಾಧಿಕಾರಿಗಳು ಮಂಜುಳಾ .ಜಿ. ಶಾಂತಮ್ಮ .ಪಾಲಾಕ್ಷಮ್ಮ. ಮಾಲಮ್ಮ .ಶಶಿಕಲಾ. ನಗರ ಘಟಕ ಅಧ್ಯಕ್ಷರಾದ ಎನ್ ಟಿ ಹನುಮಂತಪ್ಪ ಜೈ ಭಾರತಿ. ಎಂ ಡಿ ರಫೀಕ್ .ಜಬಿವುಲ್ಲಾ. ಈಶ್ವರ್ .ಧರ್ಮರಾಜ್. ಪರಮೇಶ್ .ಮಂಜುನಾಥ್ .ಸುರೇಶ್. ರಾಕೇಶ್ .ಸಂಜು .ಸಾಗರ್. ಅಲ್ಲಾಭಕ್ಷಿ .ಮುಸ್ತಪ್ಪ ಆಟೋ ರಾಫಿಕ್. ಸೈಯದ್ ದಾದಾ .ಭಾಷಾ ಪೈಲ್ವಾನ್. ಅಬ್ದುಲ್ ರೆಹಮಾನ್.ರಾಜು. ಸಾಗರ್. ಮತ್ತು ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು