

(೧ನೇ ಮಾರ್ಚ್ )
ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್ ಗ್ಯಾನಗೌಡರ್ ತಂದೆ ಶೇಖರಗೌಡರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಾಂತ್ವಾನ ಹೇಳಿ, ದೂರವಾಣಿ ಮೂಲಕ ಮಾತನಾಡಿರುವ ಸಿಎಂ ನವೀನ್ ಸಾನಿನ ಬಗ್ಗೆ ಮಾಹಿತಿ ಪಡೆದು, ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನೀವು ಧೈರ್ಯದಿಂದ ಇರಬೇಕು. ನವೀನ್ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವ ಎಲ್ಲ ಪ್ರಯತ್ನ ನಡೆದಿದೆ ಎಂದು ಬೊಮ್ಮಾಯಿಯವರು ತಿಳಿಸಿದ್ದಾರೆ.
ನವೀನ್ ಗ್ಯಾನಗೌಡರ್ ಮೃತದೇಹವನ್ನು ಭಾರತಕ್ಕೆ ತರಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಂತರ ಮಗನ ನೆನೆದು ಕಣ್ಣೀರು ಹಾಕಿದ ತಂದೆ: ಮಗ ನವೀನ್ ಗ್ಯಾನಗೌಡರ್ ಬಗ್ಗೆ ದುಃಖದಿಂದ ಮಾತನಾಡಿದ ತಂದೆ ಶೇಖರಗೌಡ ಗ್ಯಾನ ಗೌಡರ್ ಇಂದು ಮುಂಜಾನೆಯಷ್ಟೇ ಮಗನ ಜೊತೆ ದೂರವಾಣಿಯಲ್ಲಿ ಮಾತನಾಡಿರುವುದಾಗಿ ಹೇಳಿದರು. ಪ್ರತಿ ದಿನ ಎರಡರಿಂದ ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದು ದುಃಖ್ಖದಿಂದ ವಿವರಿಸಿದರು.
ಕರೆನ್ಸಿ ಬದಲಾಯಿಸಿಕೊಂಡು ಬರಲು ಹೋದಾಗ ದಾಳಿ : ಕರ್ನಾಟಕದ ಹಾವೇರಿ ಜಿಲ್ಲೆಯ ನವೀನ್ ಕಳೆದ ನಾಲ್ಕು ವರ್ಷಗಳಿಂದ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ವಾಸವಾಗಿದ್ದರು. ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್, ಮಂಗಳವಾರ ಬೆಳಗ್ಗೆ ಕರೆನ್ಸಿ ಬದಲಾಯಿಸಿಕೊಂಡು ಬರುವುದಕ್ಕೆ ತೆರಳಿದ ಸಂದರ್ಭದಲ್ಲಿ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ ಎಂದು ಅವರ ಜೊತೆಗಿದ್ದ ವಿದ್ಯಾರ್ಥಿಗಳು ವಿವರಿಸಿದ್ದಾರೆ. ಇದಕ್ಕೂ ಮೊದಲು ನವೀನ್ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಸ್ನೇಹಿತ ಪ್ರವೀಣ್ ಈ ಸಾವಿನ ಬಗ್ಗೆ ಪೋಷಕರಿಗೆ ಮೊಬೈಲ್ ಮೂಲಕ ತಿಳಿಸಿದ್ದಾನೆ.
ನೊಡೆಲ್ ಅಧಿಕಾರಿಗಳು ಕುಟುಂಬಸ್ಥರೊಂದಿಗೆ ಮಾತುಕತೆ :-
ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡರ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಬಂದಿದೆ. ನಾವು ವಿದೇಶಾಂಗ ಸಚಿವಾಲಯಕ್ಕೆ ಕರೆ ಮಾಡಿದ್ದವು. ನವೀನ್ ಪೋಷಕರಿಗೂ ಫೋನ್ ಮಾಡಿ ಮಾತನಾಡಿದ್ದೇವೆ. ವಿದೇಶಾಂಗ ಸಚಿವಾಲಯದಿಂದ ಕರೆ ಬಂದಿತ್ತು ಎಂದು ಪೋಷಕರು ವಿವರಿಸಿದ್ದಾರೆ ಎಂದು ನೋಡೆಲ್ ಅಧಿಕಾರಿ ಮನೋಜ್ ರಾಜನ್ ಹೇಳಿದ್ದಾರೆ.
ಉಕ್ರೇನ್‌ನಲ್ಲಿ ಹೊರಗೆ ಬಾರದಂತೆ ಮನವಿ : ಉಕ್ರೇನ್‌ನ ಬಹುಪಾಲು ನಗರಗಳಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ನೀವು ಇರುವ ಸ್ಥಳದಿಂದ ಯಾರೂ ಹೊರಗಡೆ ಬರಬೇಡಿ. ತುಂಬಾ ಅನಿವಾರ್ಯವಾದಲ್ಲಿ ಮಾತ್ರ ಪರಿಸ್ಥಿತಿಯನ್ನು ನೋಡಿಕೊಂಡು ಹೊರಗೆ ಬನ್ನಿ ಎಂದು ಬೆಂಗಳೂರಿನಲ್ಲಿ ನೊಡೆಲ್ ಅಧಿಕಾರಿ ಮನೋಜ್ ರಾಜನ್ ಮನವಿ ಮಾಡಿಕೊಂಡಿದ್ದಾರೆ.