ದಾವಣಗೆರೆಯಲ್ಲಿ ಗಣೇಶ ಚತುರ್ಥಿ, ಈದ್ ಮಿಲಾದ್ ಸಂಭ್ರಮದ ಆಚರಣೆಗೆ ನಾಗರೀಕ ಸೌಹಾರ್ಧ ಸಭೆ…

ದಾವಣಗೆರೆ,ಸೆ.8(ಕರ್ನಾಟಕ ವಾರ್ತೆ) ಹಬ್ಬಗಳ ಆಚರಣೆ ಐಕ್ಯತೆಯ ಪ್ರತೀಕ, ಸಮಾಜದಲ್ಲಿ ಸ್ವಾಸ್ಥ್ಯ, ಶಾಂತಿ, ಸುವ್ಯವಸ್ಥೆ ಇದ್ದರೆ ಪ್ರತಿ ಕುಟುಂಬ ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಸೌಹಾರ್ಧಯುತವಾಗಿ ಆಚರಣೆ ಮಾಡಲು ಮುಂದಾಗೋಣ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿನ ತುಂಗಭದ್ರಾ ಸಭಾಂಗಣದಲ್ಲಿ ಸೆಪ್ಟೆಂಬರ್ 18 ರಂದು ಗಣೇಶ ಚತುರ್ಥಿ ಮತ್ತು ಸೆ. 28 ರಂದು ನಡೆಯಲಿರುವ ಈದ್ ಮಿಲಾದ್ ಹಬ್ಬದ ಆಚರಣೆಯನ್ನು ಸೌಹಾರ್ಧಯುತವಾಗಿ ಆಚರಣೆ ಮಾಡುವ ನಿಟ್ಟಿನಲ್ಲಿ ಕರೆಯಲಾದ ಸೌಹಾರ್ಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ, ಈ ಎರಡೂ ಹಬ್ಬಗಳ ಮೆರವಣಿಗೆ ವೇಳೆ ಪ್ರಥಮ ಚಿಕಿತ್ಸೆ ವ್ಯವಸ್ಥೆ, ಅಂಬುಲೆನ್ಸ್ ವ್ಯವಸ್ಥೆ, ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ನಾಗರೀಕರು ಮನವಿ ಮಾಡಿದ್ದು ಹಬ್ಬದಲ್ಲಿ ಯಾರಿಗೂ ತೊಂದರೆಯಾಗದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ಮತ್ತು ಬೆಸ್ಕಾಂನಿಂದ ನಿರಂತರ ವಿದ್ಯುತ್ ಪೂರೈಕೆಗೂ ಕ್ರಮ ಕೈಗೊಳ್ಳಲಾಗುತ್ತದೆ. ಕೆಲವು ಪೆಟ್ಟಿ ಶಾಫ್‍ಗಳು, ಡಾಬಾ ಹೋಟೆಲ್‍ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತದೆ ಎಂಬ ದೂರುಗಳಿದ್ದು ಅಬಕಾರಿ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿದೆ. ಹಬ್ಬದ ವೇಳೆ ಬಂಟಿಂಗ್ಸ್, ಪ್ಲೆಕ್ಸ್ ಅಳವಡಿಸಲು ನಿಗಧಿತ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಅಳವಡಿಸಬೇಕೆಂದು ಸೂಚಿಸಲಾಗಿದೆ.

ಎಲ್ಲರೂ ಒಂದೇ ಕುಟುಂಬದ ಸದಸ್ಯರಿದ್ದಂತೆ, ಎಲ್ಲರೂ ಸೇರಿ ಜಿಲ್ಲೆಯನ್ನು ಅಭಿವೃದ್ದಿಯೆಡೆಗೆ ಕೊಂಡೊಯ್ಯಬೇಕಾಗಿದೆ. ಸಮಾಜದಲ್ಲಿ ಸ್ವಾಸ್ಥ್ಯ, ಶಾಂತಿ, ಸಾಮರಸ್ಯ ಇರಬೇಕು. ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿರಿ, ಜಿಲ್ಲಾ ಆಡಳಿತ ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ ನೀರಿನ ಮೂಲ ಕಲುಷಿತವಾಗದಂತೆ ಗಣೇಶನ ವಿಸರ್ಜನೆ ಮಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಶಾಂತಿ ಸಾಗರದಲ್ಲಿ 6 ಜಾಕ್‍ವೆಲ್‍ಗಳಿದ್ದು ಅದರ ಒಂದರಲ್ಲಿ ಮಾತ್ರ ಕುಡಿಯಲು ಯೋಗ್ಯವಲ್ಲ ಎಂದು ಈ ಮೊದಲು ಪರೀಕ್ಷಾ ವರದಿಯಲ್ಲಿ ಬಂದಿತ್ತು, ನಂತರದಲ್ಲಿ ಸರಿಯಾದ ವರದಿ ಬಂದಿರುತ್ತದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಬೆಲ್ಲದ ಗಣೇಶನ ಪ್ರತಿಷ್ಠಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಸೆ.18ರಂದು ಗಣೇಶ ಚತುರ್ಥಿ ಹಾಗೂ ಸೆ.28 ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಆಯಾ ಪೊಲೀಸ್ ಠಾಣೆಯಲ್ಲಿ ಸ್ಥಾಪಿಸಲಾಗುವ ಏಕಗವಾಕ್ಷಿಯಲ್ಲಿ ಅನುಮತಿ ಪಡೆದು ಪ್ರತಿಷ್ಠಾಪನೆ ಮಾಡಬೇಕು. ಈ ಹಿಂದಿನ ಹಳೆಯ ಪದ್ಧತಿ, ನಿಯಮ ಅನುಸರಿಸಿ ಎಲ್ಲಾ ರೀತಿಯ ಸಿದ್ಧತೆ ಹಾಗೂ ಶಾಂತಿಯುತವಾಗಿ ಆಚರಿಸಬೇಕು. ಹೊಸದಾಗಿ ಸೂಕ್ಷ್ಮಯುತವಾದ ಪ್ರದೇಶಗಳಲ್ಲಿ ಗಣೇಶ ವಿಗ್ರಹಗಳ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ.
ಗಣೇಶ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿದ ಸ್ಥಳಗಳಲ್ಲಿ ಬೆಳಕು ಹಾಗೂ ಸಿ.ಸಿ ಟಿವಿ ವ್ಯವಸ್ಥೆ ಮಾಡಿಕೊಳ್ಳಬೇಕು, ಆಯೋಜಕರೇ ಸಂಪೂರ್ಣ ಹೊಣೆ ಹೊರಬೇಕು, ಹಾಗೂ ಅಹಿತಕರ ಘಟನೆಗಳು ನಡೆದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ತಿಳಿಸಬೇಕು. ಹಬ್ಬದ ಆಚರಣೆಗಳಲ್ಲಿ ಪ್ರಚೋದನಾಕಾರಿ ಹೇಳಿಕೆ, ಅಸಭ್ಯ ವರ್ತನೆ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಯಾವುದೇ ವಿದ್ಯುತ್ ಅವಘಡಗಳು ನಡೆಯದಂತೆ ಮೂರ್ತಿಗಳ ಕಡಿಮೆ ಎತ್ತರ, ಗಣಪತಿ ಅಲಂಕಾರ ಹಾಗೂ ಸಣ್ಣ ಗೋಪುರಗಳ ನಿರ್ಮಾಣ ಮಾಡಬೇಕು. ಧ್ವನಿವರ್ಧಕಗಳಿಗೆ ಬೆಳಗ್ಗೆ 6 ರಿಂದ ರಾತ್ರಿ 10ಗಂಟೆಯವರೆಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಹಬ್ಬಗಳ ಆಚರಣೆ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ಧಿಗಳು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆಚರಣಗೆ ಬಲವಂತವಾಗಿ ದೇಣಿಗೆ ಸಂಗ್ರಹಿಸಬಾರದು ಎಂದರು.

ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ, ಸೌಹಾರ್ಧತೆಯಿಂದ ಆಚರಣೆ ಮಾಡಬೇಕು. ಇಲಾಖೆಯಿಂದ ನೀಡಲಾಗುವ ಸೂಚನೆಗಳನ್ನು ನಿರ್ಬಂಧ ಎಂದುಕೊಳ್ಳಬಾರದು. ಎಲ್ಲರೂ ಕಾನೂನನ್ನು ಗೌರವಿಸಬೇಕು, ಇಲಾಖೆಯು ಸಹ ಎಲ್ಲರಿಗೂ ಸಹಕಾರ ನೀಡಲಿದೆ ಎಂದರು.

ಈ ವೇಳೆ ನಾಗರೀಕರು ಮಾತನಾಡಿ ದಾವಣಗೆರೆಯಲ್ಲಿ 1992 ರ ನಂತರ ಎಲ್ಲಾ ಹಬ್ಬಗಳನ್ನು ಬಹಳ ಸೌಹಾರ್ಧಯುತವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸೌಹಾರ್ಧತೆ ಇಲ್ಲದಿದ್ದಲ್ಲಿ ನಗರದ ಅಭಿವೃದ್ದಿ ಕುಂಟಿತವಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಒಕ್ಕೋರಲಿನಿಂದ ತಿಳಿಸಿ ಕುಡಿಯುವ ನೀರಿನ ಪೂರೈಕೆ, ಕಸ ವಿಲೇವಾರಿ, ಸಾರ್ವಜನಿಕ ಶಾಂತಿ ಕಾಪಾಡಲು ಹಬ್ಬದ ವೇಳೆ ಮದ್ಯಪಾನ ನಿಷೇಧ, ಸುಗಮ ಮೆರವಣಿಗೆಗೆ ಅವಕಾಶ ಮಾಡಿಕೊಡಲು ಮನವಿ ಮಾಡಿದರು.

ಪಾಲಿಕೆಯಿಂದ ಗಣಪತಿ ವಿಸರ್ಜನೆಗೆ ಆಯ್ದ ಸ್ಥಳಗಳನ್ನು ಗುರುತಿಸಲಾಗುತ್ತದೆ ಮತ್ತು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವುದು, ನೀರು ಪೂರೈಕೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ರಕ್ಷಣಾಧಿಕಾರಿ ರಾಮಗೊಂಡ ಬಿ.ಬಸರಗಿ ಸೇರಿದಂತೆ ಅನೇಕ ನಾಗರೀಕರ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.

  • Related Posts

    ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭ…

    ದಿನಾಂಕ: 01-01-2025 ರಿಂದ 31-01-2025 ಒಂದು ತಿಂಗಳ ಕಾಲ ಪ್ರತಿ ವರ್ಷದಂತೆ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದು, ಇಂದು ದಾವಣಗೆರೆ ನಗರದ ರೇಣುಕಾ ಮಂದಿರದ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆಯ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ…

    ಶಾಲಾ ಆವರಣ ಅನೈತಿಕ ತಾಣಗಳಾಗಬಾರದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು, ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್….

    ದಾವಣಗೆರೆ, ಜನವರಿ.28 : ಜಿಲ್ಲೆಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಸೇರಿದಂತೆ ಕೊಠಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಗುಣಮಟ್ಟದ ಶಿಕ್ಷಣ ಭವಿಷ್ಯದ ನಾಗರಿಕರಾಗುವ ಪ್ರತಿ ಮಕ್ಕಳಿಗೆ ಸಿಗುವಂತೆ ಮಾಡಬೇಕು, ಆದರೆ ಸಂಜೆಯ ವೇಳೆ…

    Leave a Reply

    Your email address will not be published. Required fields are marked *

    error: Content is protected !!