

ದಾವಣಗೆರೆ s 04 : ತನ್ನ ಅಶ್ಲೀಲ ವಿಡಿಯೋ ಹರಿಯಬಿಡುವ ಬೆದರಿಕೆಯಿಂದ ಕಂಗಾಲಾಗಿ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷ ವಿದ್ಯಾರ್ಥಿನಿಯೊಬ್ಬರು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ ಮೈಗೆ ಪೆಟ್ರೊಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆಕೆ ನೀಡಿರುವ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ಆರೋಪಿಗಳಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದಾಳೆ.
ಶಾಲೆಗೆ ಬರುತ್ತಿದ್ದ ವೇಳೆ ಪರಿಚಯವಾಗಿದ್ದ ಇಬ್ಬರು ಯುವಕರು ಈಕೆಯ ಜತೆಗೆ ಸಲಿಗೆ ಬೆಳೆಸಿಕೊಂಡಿದ್ದರು. ಒಂದು ದಿನ ಬೇಕರಿ ತಿನಿಸಿನಲ್ಲಿ ಮತ್ತು ಬರುವ ಔಷಧ ಹಾಕಿ ವಿದ್ಯಾರ್ಥಿನಿಯ ಆಶ್ಲಿಲ ವಿಡಿಯೋ ಮಾಡಿಕೊಂಡಿದ್ದರು. ತಾವು ಕರೆದಾಗ ಬಾರದೇ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಬೆದರಿದ ವಿದ್ಯಾರ್ಥಿನಿ, ಪೆಟ್ರೊಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಅರ್ಧಕ್ಕೂ ಹೆಚ್ಚು ಸುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿನಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮಟ್ಟಿದ್ದು, ಬ್ಲ್ಯಾಕ್‌ಮೇಲ್ ಮಾಡಿದ ಪಾತಕಿಗಳನ್ನು ಪತ್ತೆ ಹಚ್ಚಿ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.