

ದಾವಣಗೆರೆ : ಪ್ರಧಾನಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಆಗಮಿಸುವ ವೇಳೆ ಸ್ಫೋಟಕಗಳ ಪತ್ತೆ ಕಾರ್ಯದಲ್ಲಿ ಪೊಲೀಸ್ ಇಲಾಖೆಗೆ ಬೆನ್ನೆಲುಬಾಗಿದ್ದ ಶ್ವಾನ ಸೌಮ್ಯ ಶನಿವಾರ ಅನಾರೋಗ್ಯದಿಂದ ಮೃತಪಟ್ಟಿದ್ದು, ಮಧ್ಯಾಹ್ನ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಜಿಲ್ಲಾ ಪೊಲೀಸ್ ಇಲಾಖೆಯ ಶ್ವಾನ ದಳದಲ್ಲಿದ್ದ ಸ್ಫೋಟಕ ಪತ್ತೆ ವಿಭಾಗದ ಶ್ವಾನ ಸೌಮ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಮೃತಪಟ್ಟಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಗೌರವ ವಂದನೆ ಸಲ್ಲಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಆವರಣದಲ್ಲಿ ಶ್ವಾನದ ಮೃತದೇಹ ಇಟ್ಟು ಗಾಳಿಯಲ್ಲಿ ಗುಂಡು ಹೊಡೆದು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಎಸ್ಪಿ ಉಮಾ ಪ್ರಶಾಂತ್ ಮಾತನಾಡಿದ ಅವರು, ಶ್ವಾನದ ಸಾಧನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಪೊಲೀಸ್ ಇಲಾಖೆಗೆ ಅನನ್ಯ ಸೇವೆ ಸಲ್ಲಿಸಿದ ಸೌಮ್ಯಳನ್ನು ಕಳೆದುಕೊಂಡಿದ್ದು, ಇಲಾಖೆಗೆ ತುಂಬಲಾರದ ನಷ್ಟ ಎಂದು ಹೇಳಿದರು. ಈ ವೇಳೆ ಡಿವೈಎಸ್ಪಿ, ಪೊಲೀಸ್ ಸಿಬ್ಬಂದಿ ಹಾಜರಿದ್ದು, ಶ್ವಾನಕ್ಕೆ ಗೌರವ ಸಲ್ಲಿಸಿದರು.

ಅಪರಾಧಿಗಳಿಗೆ ಸಿಂಹಸ್ವಪ್ನವಾಗಿದ್ದ ತುಂಗಾ ಸಾವಿನ ನಂತರ ಸೌಮ್ಯ ಸಾವುಕಂಡಿರುವುದು ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ದರೋಡೆ, ಕೊಲೆ ಸೇರಿದಂತೆ ಹಲವು ಪ್ರಕರಣಗಳ ಬೇಧಿಸಿದ್ದ ತುಂಗಾ ಅಕಾಲಿಕ ಸಾವಿಗೀಡಾಗಿತ್ತು.

ಈಗ ಸೌಮ್ಯ ಕೂಡ ಸಾವನ್ನಪ್ಪಿದ್ದು, ಪೊಲೀಸ್ ಶ್ವಾನ ದಳದ ಎರಡನೇ ಅತ್ಯುತ್ತಮ ಕಾರ್ಯವೈಖರಿಯ ಶ್ವಾನ ಇಲ್ಲವಂತಾಗಿದೆ.ಇನ್ನು ಈ ಶ್ವಾನ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಅವರೂ ಸಹ ಈ ಶ್ವಾನದ ಉಳಿವಿಗೆ ಸಾಕಷ್ಟು ಶ್ರಮ ವಹಿಸಿದ್ದರು. ಇದಕ್ಕಾಗಿ ಬೆಂಗಳೂರಿಗೂ ಸಹ ಶ್ವಾನ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದೆ.
