

ದಾವಣಗೆರೆ ; ಕಿಡಿಗೇಡಿಗಳಯಿಂದ ಆಸಿಡ್ ಮಿಶ್ರಿತ ಕೆಮಿಕಲ್ ನೀರು ಸೇರ್ಪಡೆಯಾದ ಪರಿಣಾಮ ಬೆಳೆದಿದ್ದ ಬೆಳೆ ಸಂಪೂರ್ಣ ನಾಶವಾದ ಘಟನೆ ದಾವಣಗೆರೆ ಹೊರವಲಯದ ಬಾತಿ ಕೆರೆ ಪಕ್ಕದಲ್ಲಿರುವ ಭತ್ತದ ಜಮೀನುಗಳಲ್ಲಿ ನಾಟಿ ಮಾಡಿದ್ದ ಪೈರು ಸುಟ್ಟು ಹೋಗಿದೆ.

ಬಾತಿ ಗ್ರಾಮದ ವಾಸು ಎನ್ನುವರಿಗೆ ಸೇರಿದ ಒಂದು ಎಕರೆ ಭತ್ತದ ಗದ್ದೆ ಸಂಪೂರ್ಣ ಹಾಳಾಗಿದ್ದು, ಈ ಗದ್ದೆಗೆ ಕೆಮಿಕಲ್ ನೀರು ಸೇರ್ಪಡೆಯಾದ ಹಿನ್ನಲೆ ನಾಟಿ ಮಾಡಿದ್ದ ಪೈರು ಕಪ್ಪು ಬಣ್ಣಕ್ಕೆ ತಿರುಗಿ, ಸುಟ್ಟ ರೀತಿ ಕಾಣುತ್ತಿದೆ. ಇದೆಕ್ಕೆಲ್ಲ ಕಾರಣ ಈ ಜಮೀನಿಗೆ ಹಾಯಿಸುವ ನೀರು, ಭದ್ರ ಚಾನಲ್ನಿಂದ ಬರುತ್ತಿದ್ದು, ಆ ಭದ್ರ ಚಾನಲ್ಗೆ ಆಸಿಡ್ ಮಿಶ್ರಿತ ಕೆಮಿಕಲ್ನ್ನು ಟ್ಯಾಂಕರ್ ಮೂಲಕ ಬಿಟ್ಟಿದ್ದಾರೆ ಇದರಿಂದ ಚಾನಲ್ ನೀರು ಸಂಪೂರ್ಣ ಕಲುಷಿತವಾಗಿದೆ.

ಈ ನೀರು ವಾಸು ಅವರ ಜಮೀನಿಗೆ ಹರಿದಿದ್ದು, ಇದರಿಂದ ಭತ್ತದ ಪೈರು ಸಂಪೂರ್ಣ ಹಾಳಾಗಿದೆ. ರಾತ್ರೋರಾತ್ರಿ ಟ್ಯಾಂಕರ್ಗಳಲ್ಲಿ ತಂದು ಸುರಿದು ಹೋಗುತ್ತಾರೆ. ಇದರಿಂದ ಭದ್ರಾ ಚಾನಲ್ನ ನೀರು ಕಲುಷಿತವಾಗಿ ಮೀನುಗಳೆಲ್ಲ ಸಾವನ್ನಪ್ಪಿವೆ. ಇದೇ ನೀರು ರೈತರ ಜಮೀನುಗಳಿಗೆ ಹೋಗಿ ಇಡೀ ಭತ್ತದ ಗದ್ದೆ ಕೆಟ್ಟ ವಾಸನೆ ಜೊತೆಗೆ ಜಿಡ್ಡು ಜಿಡ್ಡಾದ ನೀರು ನಿಂತಿದೆ.

ಇದೀಗ ಈ ನೀರನ್ನು ರೈತರು ಪಂಪ್ ಮೂಲಕ ಹೊರ ಹಾಕುತ್ತಿದ್ದಾರೆ. ಅಲ್ಲದೆ, ಕೆಮಿಕಲ್ ನೀರು ನಿಂತ ಭೂಮಿ ಕೂಡ ಬರಡು ಭೂಮಿಯಾಗುವ ಅತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.

ದಾವಣಗೆರೆ ಹತ್ತಿರ ಜಮೀನು ಇದೆ ಎನ್ನುವ ಖುಷಿಗಿಂತ ಇಲ್ಲಿನ ರೈತರಿಗೆ ಅತಂಕವೇ ಹೆಚ್ಚಾಗಿದೆ. ಈಗಾಗಲೇ 20 ಸಾವಿರಕ್ಕೂ ಹೆಚ್ವು ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತನಿಗೆ, ಕೆಮಿಕಲ್ ನೀರಿನಿಂದ ಇಡೀ ಬೆಳೆ ಹಾಳಾಗುವ ಸ್ಥಿತಿ ತಲುಪಿದೆ. ಏನೇ ಆಗಲಿ ಈ ರೀತಿ ರೈತರಿಗೆ ತೊಂದರೆ ಕೊಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದು ಪೊಲೀಸರಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.