

ಗಣೇಶ್ ಅಭಿನಯದ ಬಾನದಾರಿಯಲ್ಲಿ ಸಿನಿಮಾ ಈ ಮೊದಲು ಕಬ್ಜ ಸಿನಿಮಾ ಜೊತೆಗೆ ಮಾರ್ಚ್ 17ರಂದು ತೆರೆಕಾಣಲು ನಿರ್ಧರಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಪ್ರೀತಂ ಗುಬ್ಬಿ ನಿರ್ದೇಶನದ ರೊಮ್ಯಾಂಟಿಕ್-ಅಡ್ವೆಂಚರ್ ಸಿನಿಮಾ ಈಗ ಸೆಪ್ಟೆಂಬರ್ 15 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಚಿತ್ರದಲ್ಲಿ ಗಣೇಶ್ ಕ್ರಿಕೆಟಿಗನಾಗಿ ಕಾಣಿಸಿಕೊಂಡಿದ್ದಾರೆ. ರುಕ್ಮಿಣಿ ವಸಂತ್ ಮತ್ತು ರೀಷ್ಮಾ ನಾಣಯ್ಯ ಗೋಲ್ಡನ್‌ಸ್ಟಾರ್ ಜೊತೆಗೆ ನಟಿಸಿದ್ದಾರೆ.

ಈ ಚಿತ್ರವು ಪ್ರೀತಂ ಜೊತೆ ಗಣೇಶ್ ಅವರ ನಾಲ್ಕನೇ ಚಿತ್ರವಾಗಿದೆ. ಪ್ರೀತಂ ಈ ಹಿಂದೆ ಮುಂಗಾರು ಮಳೆ ಸಿನಿಮಾದಲ್ಲಿ ಸಹ-ಬರಹಗಾರರಾಗಿ ಕೆಲಸ ಮಾಡಿದ್ದರು. ಬಳಿಕ ಅವರು ಗಣೇಶ್ ಅವರೊಂದಿಗೆ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ, ಮತ್ತು 99 ಚಿತ್ರಗಳನ್ನು ನಿರ್ದೇಶಿಸಿದರು.

ಬಾನದಾರಿಯಲ್ಲಿ ಚಿತ್ರಕ್ಕೆ ಛಾಯಾಗ್ರಾಹಕಿ ಪ್ರೀತಾ ಜಯರಾಮನ್ ಕಥೆ ಬರೆದಿದ್ದು, ಪ್ರೀತಂ ಅವರೇ ಚಿತ್ರಕಥೆ ಬರೆದಿದ್ದಾರೆ. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ನಟನೆಯ ಚಿತ್ರದ ಹಾಡೊಂದರಿಂದ ಶೀರ್ಷಿಕೆಯನ್ನು ಪಡೆಯಲಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಅರ್ಮಾನ್ ಮಲಿಕ್ ಹಾಡಿರುವ ಇತ್ತೀಚಿನ ಹಾಡನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದರು.