

ದಾವಣಗೆರೆ. (ಆ.೨೪); ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಮಾರುಕಟ್ಟೆಗಳಲ್ಲಿ ಹೂವು- ಹಣ್ಣುಗಳ ಬೆಲೆಯಯ ಗಗನಕ್ಕೆ ಏರಿದೆ ಗ್ರಾಹಕರು ಕೂಡ ದುಪ್ಪಟ್ಟು ದರವಾದರೂ ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.ನಾಳೆ ವರಮಹಾಲಕ್ಷ್ಮಿ ಹಬ್ಬದ ಆಚರಣೆ ನಡೆಯಲಿದ್ದು ನಗರದ ತಹಶೀಲ್ದಾರ್ ಕಚೇರಿ ಬಳಿ ಹೂ ಮಾರುಕಟ್ಟೆ ಸೇರಿದಂತೆ ಗಡಿಯಾರಕಂಬ,ಜಯದೇವವೃತ್ತ,ವಿದ್ಯಾರ್ಥಿ ಭವನ,ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆ ,ವಿದ್ಯಾನಗರ ಸೇರಿದಂತೆ ಹಲವೆಡೆ ಹೂಹಣ್ಣು, ಬಾಳೆಕಂಬದ ಮಾರಾಟ ಬೆಳಗಿನಿಂದಲೇ ಪ್ರಾರಂಭವಾಗಿತ್ತು. ವರ್ತಕರು ಹೂ-ಹಣ್ಣಿನ ರಾಶಿ ಹಾಕಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು.

ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವುಗಳೇ ಪ್ರಮುಖ ಆಕರ್ಷಣೆ. ಮನೆ-ಮನೆಗಳಲ್ಲಿ ಪ್ರತಿಷ್ಠಾಪನೆಗೊಳ್ಳುವ ದೇವಿಯ ಅಲಂಕಾರಕ್ಕೆ, ಮನೆಗೆ ಬಂದ ಮಹಿಳೆಯರಿಗೆ ನೀಡುವ ಬಾಗಿನಕ್ಕೆ ಹೂವುಗಳು ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ವಾರದಿಂದಲೇ ಹೂವಿನ ಬೆಲೆ ಏರಿಕೆ ಆಗುತ್ತಿದ್ದು, ಹೂಗಳ ಬೆಲೆ ದುಪ್ಪಟ್ಟಾಗಿದೆ. ಕೆ.ಜಿ. ಲೆಕ್ಕದಲ್ಲಿ ಕೊಳ್ಳಲು ಬಯಸಿ ಬಂದವರು ಗ್ರಾಂಗಳ ಲೆಕ್ಕದಲ್ಲಿ ತೂಕ ಮಾಡಿಸಿಕೊಂಡು ಕೊಂಡೊಯ್ದರು.
ಕೆಲವು ದಿನದ ಹಿಂದಷ್ಟೇ ಪ್ರತಿ ಕೆ.ಜಿ.ಗೆ 1600- 800ರ ದರದಲ್ಲಿ ಮಾರಾಟ ಆಗುತ್ತಿದ್ದ ಬಿಡಿ ಹೂಗಳ ದರ ದುಪ್ಪಟ್ಟಾಗಿದೆ. ಲಕ್ಷ್ಮೀ ದೇವಿಯ ಬಹುಇಷ್ಟದ ಕಮಲದ ಹೂ ಜೋಡಿಗೆ ೨೦೦ ಇತ್ತು. ಚೆಂಡು ಹೂ ಮಾರಿಗೆ ೬೦ ರೂ, ಬಿಡಿ ಗುಲಾಬಿ ಕಾಲು ಕೆಜಿಗೆ ೨೦೦ ರಿಂದ ೨೫೦ ರೂ ಇತ್ತು.
ಹಬ್ಬದ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆಯೂ ಹೆಚ್ಚಾಗಿದೆ. ಅದರಲ್ಲೂ ಏಲಕ್ಕಿ ಬಾಳೆ ಹಣ್ಣು ಪ್ರತಿ ಕೆ.ಜಿ.ಗೆ ೧೦೦ ದುಬಾರಿ ಆಗಿದೆ. ಸೇಬು, ದಾಳಿಂಬೆ, ಸೀಬೆ ಮೊದಲಾದ ಹಣ್ಣುಗಳ ಬೆಲೆಯೂ ಹೆಚ್ಚಾಗಿತ್ತು.
